ಮೈಸೂರು

ಚೀನಾ ಸರ್ಕಾರ ಟಿಬೇಟಿಯನ್ನರ ಮೇಲೆ ಮಾಡುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ನಿಲ್ಲಿಸಲಿ:ಬಿ.ವಿ.ಜವರೇಗೌಡ ಆಗ್ರಹ

ಬೈಲಕುಪ್ಪೆ : ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ  ಟಿಬೇಟ್ ನಿರಾಶ್ರಿತರು 57ವರ್ಷಗಳ ಹಿಂದೆ ಟಿಬೇಟ್‍ನ ಮೇಲಿನ ಚೈನಾ ಆಕ್ರಮಣದ ವಿರುದ್ಧ  ಪ್ರತಿಭಟನಾ ವಾರ್ಷಿಕ ದಿನಾಚರಣೆಯನ್ನು ಬೈಲಕುಪ್ಪೆಯ ಟಿಬೇಟನ್ ನಿರಾಶ್ರಿತರ ಡಿಕಿ ಲಾರ್ಸೋ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದರು. ಇದೇ ಸಂದರ್ಭ ಟಿಬೇಟ್‍ನ ಮೊದಲ ಮಹಿಳಾ ದಿನಾಚರಣೆಯನ್ನೂ ಆಚರಿಸಲಾಯಿತು.

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ಟಿಬೇಟ್ ಸರ್ಕಾರ ಹಾಗೂ ಪಾರ್ಲಿಮೆಂಟ್ ಹೊರಡಿಸಿದ ಪ್ರಕಟಣೆಯನ್ನು ಇಲ್ಲಿನ ಸೆಟ್ಲ್‍ಮೆಂಟ್ ಅಧಿಕಾರಿ ಲಾಕ್ಪಾ ಸೆರಿಂಗ್,  ದೆಲೆಕ್ ಜುಗ್ನೆ ನೆರೆದಿದ್ದ ಸಾವಿರಾರು ಜನರ ಮುಂದೆ ಓದಿ ಹೇಳಿದರು.   ಟಿಬೆಟ್ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ಟಿಬೇಟ್ ಧೈರ್ಯಶಾಲಿಗಳನ್ನು ಸ್ಮರಿಸಿ ಈ ಕುರಿತು ಮುಂದಿನ ಹೋರಾಟವನ್ನು ಶಾಂತಿಯುತವಾಗಿ ದಲೈಲಾಮ ರವರ ನಾಯಕತ್ವದಲ್ಲಿ ಮುಂದುವರಿಸಬೇಕೆಂದು ತೀರ್ಮಾನಿಸಲಾಯಿತು.

ಸಮಾರಂಭದ ಮುಖ್ಯ ಅತಿಥಿಯಾಗಿ  ಆಗಮಿಸಿದ್ದ ಇಂಡೋ-ಟಿಬೇಟಿಯನ್ ಫ್ರೆಂಡ್‍ಷಿಪ್ ಸೊಸೈಟಿಯ ಅಧ್ಯಕ್ಷ.ಬಿ.ವಿ.ಜವರೇಗೌಡ ಮಾತನಾಡಿ ಚೀನಾ ಸರ್ಕಾರ ಟಿಬೇಟಿಯನ್ನರ ಮೇಲೆ ಸತತವಾಗಿ ಮಾಡುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ನಿಲ್ಲಿಸಬೇಕು ಹಾಗೂ ಟಿಬೇಟಿಯನ್ನರ ಧರ್ಮ ಮತ್ತು ಸಂಸ್ಕೃತಿಯ ಮೇಲೆ ಯಾವುದೇ ಹಾನಿ ಉಂಟು ಮಾಡಬಾರದು ಎಂದು ಹೇಳಿದರು. ಟಿಬೇಟಿಯನ್ನರಿಗೆ ಸ್ವಾತಂತ್ರ್ಯವನ್ನು ಕೊಡುವುದರ ಮೂಲಕ ದಲೈಲಾಮಾ ಎಲ್ಲರನ್ನೂ ವಾಪಸ್ ಟಿಬೇಟ್‍ಗೆ ಹೋಗುವಂತೆ ಮಾಡಬೇಕೆಂದು ಒತ್ತಾಯಿಸಿದರು.  ವಿಶ್ವ ಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ  ಮಾಡಿದ ಟಿಬೇಟ್ ದೇಶದ ಕುರಿತು ಮಾಡಿದ ಮೂರು ಗೊತ್ತುವಳಿಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದರು.

ಟಿಬೇಟ್ ಸರ್ಕಾರದ ಮಾಜಿ ಧಾರ್ಮಿಕ ಮತ್ತು ಸಂಸ್ಕೃತಿ ಮಂತ್ರಿ ಸೆರಿಂಗ್ ಪುಂಟ್ಸೋಕ್‍ ಮಾತನಾಡಿ ಟಿಬೇಟಿಯನ್ನರ ಮೇಲಿನ ಚೈನಾ ದೇಶದ ಆಕ್ರಮಣವನ್ನು ತೀವ್ರವಾಗಿ ಖಂಡಿಸಿದರು.

ಟಿಬೇಟಿಯನ್ ಮಹಿಳಾ ಸಂಘದ ಅಧ್ಯಕ್ಷೆ  ಟಿಂಜಿನ್ ಡೋಲ್ಮ  ಕೇಂದ್ರೀಯ ಟಿಬೇಟಿಯನ್ ಮಹಿಳಾ ಸಂಘ ಹೊರಡಿಸಿದ ವರದಿಯನ್ನು ಓದಿದರಲ್ಲದೆ ಟಿಬೇಟ್ ಮಹಿಳಾ ದಿನಾಚರಣೆಯ ಕುರಿತು ಮಾತನಾಡಿದರು.

ಸಮಾರಂಭದಲ್ಲಿ ಎಸ್.ಓ.ಎಸ್.ನ  ನಿರ್ದೇಶಕರು, ಟಿಬೇಟ್‍ನ ಕೇಂದ್ರೀಯ ಶಾಲೆಯ ಪ್ರಾಂಶುಪಾಲರು, ಜಸ್ಟಿಸ್ ಕಮೀಷನರ್, ಟಿಬೇಟ್ ಸ್ವಾತಂತ್ರ್ಯ ಹೋರಾಟ ಸಮಿತಿ ಅಧ್ಯಕ್ಷರು, ಇಂಡೋ-ಟಿಬೇಟನ್ ಅಸೋಸಿಯೇಶನ್ ದಕ್ಷಿಣ-ವಲಯದ ಪ್ರತಿನಿಧಿ ಜೆ.ಪಿ.ಅರಸ್, ಕಾರ್ಯದರ್ಶಿ ಎ.ಎ.ಚೆಂಗಪ್ಪ   ಉಪಸ್ಥಿತರಿದ್ದರು. ಟೆಂಜಿನ್ ಪಾಲ್ಜರ್ ವಂದಿಸಿದರು. (ಆರ್ ಬಿ ಆರ್-ಎಸ್.ಎಚ್)

Leave a Reply

comments

Related Articles

error: