ಪ್ರಮುಖ ಸುದ್ದಿಮೈಸೂರು

`ಮ್ಯಾನ್ ವರ್ಸಸ್ ವೈಲ್ಡ್’ ಚಿತ್ರೀಕರಣ ಮುಗಿಸಿ ಚೆನ್ನೈಗೆ ತೆರಳಿದ ರಜನಿಕಾಂತ್: ಇಂದು ಅಕ್ಷಯ್ ಕುಮಾರ್ ಭಾಗಿ

ಮೈಸೂರು,ಜ.29-ಸೂಪರ್ ಸ್ಟಾರ್ ರಜನಿಕಾಂತ್ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲೆಹೊಳೆ ವಲಯದಲ್ಲಿ ಹೆಸರಾಂತ ವನ್ಯಜೀವಿ ಸಾಕ್ಷ್ಯಚಿತ್ರ ನಿರ್ದೇಶಕ ಬೇರ್ ಗ್ರಿಲ್ಸ್ ನಿರ್ದೇಶನದಲ್ಲಿ ನಡೆದ `ಮ್ಯಾನ್ ವರ್ಸಸ್ ವೈಲ್ಡ್’ ಸಾಹಸಮಯ ಸಾಕ್ಷ್ಯಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

ಪುತ್ರಿ ಸೌಂದರ್ಯ ಅವರೊಂದಿಗೆ ಆಗಮಿಸಿದ್ದ ರಜನಿಕಾಂತ್ ಚಿತ್ರೀಕರಣಕ್ಕೆ ಆಗಮಿಸಿದ್ದರು. ಬೆಂಗಳೂರಿನಿಂದ ಗುಂಡ್ಲುಪೇಟೆಗೆ ಹೆಲಿಕಾಪ್ಟರ್ ನಲ್ಲಿ ಮ್ಯಾನ್ ವರ್ಸಸ್ ವೈಲ್ಡ್ ನಿರ್ದೇಶಕ ಬೇರ್ ಗ್ರಿಲ್ಸ್ ಬಂದಿಳಿದರು. ಬಳಿಕ ಚಿತ್ರೀಕರಣಕ್ಕೆ ನಿರ್ಧರಿಸಿದ್ದ ಬಂಡೀಪುರ ಅರಣ್ಯ ಮೂಲೆಹೊಳೆ ರೇಂಜ್ ಗೆ ನಟ ರಜನಿಕಾಂತ್, ಬೇರ್ ಗ್ರಿಲ್ಸ್ ಅವರನ್ನು ಕರೆದೊಯ್ಯಲಾಯಿತು.

ಉರಿ ಬಿಸಿಲಿನಿಂದ ಬಂಡೀಪುರ ಸೇರಿದಂತೆ ಎಲ್ಲಾ ಅರಣ್ಯ ಪ್ರದೇಶ ಬರಡಾಗಿದ್ದು, ಲಂಟಾನಾ ಪೊದೆಗಳು ಸಂಪೂರ್ಣ ಒಣಗಿ ನಿಂತಿವೆ. ಇವುಗಳನ್ನು ಸೀಳಿಕೊಂಡು ಬರುವ ದೃಶ್ಯದ ಚಿತ್ರೀಕರಣದ ವೇಳೆ ರಜನಿಕಾಂತ್ ಅವರ ಬಲ ತೋಳಿಗೆ ಲಂಟಾನದ ಕಡ್ಡಿ ಬಡಿದಿದೆ. ಪರಿಣಾಮ ತೋಳಿಗೆ ಸಣ್ಣದಾಗಿ ಗಾಯಗಳಾಗಿವೆ.

ಹತ್ತಾರು ಕ್ಯಾಮರಾಮನ್ ಗಳು, ಸಹಾಯಕರು ಹಾಗೂ ನೂರಾರು ಮಂದಿ ಎಸ್ಟಿಪಿಎಫ್ ಸಿಬ್ಬಂದಿ (ಸ್ಪೆಷಲ್ ಟೈಗರ್ ಪ್ರೊಟೆಕ್ಷನ್ ಫೋರ್ಸ್) ಭದ್ರತೆಯಲ್ಲಿ ಚಿತ್ರೀಕರಣ ಮಾಡಲಾಯಿತು. ಬೆಳಿಗ್ಗೆಯಿಂದ ಸಂಜೆ 4 ಗಂಟೆಯವರೆಗೂ ಚಮ್ಮನಹಳ್ಳಿ ಎಪಿಸಿ ಬಳಿಯಿಂದ ಹೆಬ್ಬಳ್ಳ ಹಾಗೂ ಟೈಗರ್ ರಸ್ತೆ ವಿವಿಧೆಡೆ ಚಿತ್ರೀಕರಣ ನಡೆಯಿತು.

ರಜನಿ ಪುತ್ರಿ ಸೌಂದರ್ಯ ಅರಣ್ಯ ಇಲಾಖೆ ಜೀಪ್ ನಲ್ಲಿಯೇ ಕುಳಿದು ತಂದೆ ಅಭಿನಯಿಸುತ್ತಿದ್ದ ಸಾಕ್ಷ್ಯಚಿತ್ರದ ತುಣುಕನ್ನು ಕಣ್ತುಂಬಿಕೊಂಡರು. ಚಿತ್ರೀಕರಣದ ಬಳಿಕ ಸಿಬ್ಬಂದಿಯೊಂದಿಗೆ ಗ್ರೂಪ್ ಫೋಟೋ ತೆಗೆಸಿಕೊಂಡರು. ಒಂದು ದಿನದ ಶೂಟಿಂಗ್ ಗಾಗಿ ಆಗಮಿಸಿದ್ದ ರಜನಿಕಾಂತ್ ಸಂಜೆ 5ಕ್ಕೆ ಮೈಸೂರಿಗೆ ಬಂದು ಚೆನ್ನೈಗೆ ಮರಳಿದ್ದಾರೆ.

ಸೋಮವಾರ ಬೆಳಿಗ್ಗೆ ಚೆನ್ನೈನಿಂದ ಆಗಮಿಸಿದ್ದ ರಜನಿಕಾಂತ್ ಬಂಡೀಪುರ ಅರಣ್ಯದಂಚಿನ ಗ್ರಾಮ ಮಂಗಲ ಬಳಿ ಇರುವ ಸರಾಯಿ ಖಾಸಗಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದರು.

ಇಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂದು ಸಂಜೆವರೆಗೂ ಚಿತ್ರೀಕರಣ ನಡೆಯಲಿದ್ದು, ಬಳಿಕ ಚಿತ್ರತಂಡ ಬಂಡೀಪುರದಿಂದ ನಿರ್ಗಮಿಸಲಿದೆ.

ಕೇಂದ್ರ ಹಾಗೂ ರಾಜ್ಯ ಅರಣ್ಯ ಇಲಾಖೆಯಿಂದ ಈ ಸಾಕ್ಷ್ಯಚಿತ್ರ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ. ಬೆನಿಜಾಯ್ ಏಷ್ಯಾ ಗ್ರೂಪ್ ನ ಸೆವೆನ್ ಟಾರಸ್ ಸ್ಟುಡಿಯೋ, ಭಾರತವೂ ಸೇರಿದಂತೆ ವಿಶ್ವದ ವಿವಿಧ ಅರಣ್ಯ ಪ್ರದೇಶದಲ್ಲಿ ಮ್ಯಾನ್ ವರ್ಸಸ್ ವೈಲ್ಡ್ ಸಾಕ್ಷ್ಯಚಿತ್ರ ಚಿತ್ರೀಕರಿಸಲು ಅನುಮತಿ ಪಡೆದಿದೆ. ಕಳೆದ ವರ್ಷ ಪ್ರಧಾನಿ ಮೋದಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಭಾರತದಲ್ಲಿ ಚಿತ್ರೀಕರಣ ನಡೆಸಲು ಸುಲಭವಾಗಿ ಅನುಮತಿ ಸಿಕ್ಕಿದೆ. ಬಂಡೀಪುರ ಅರಣ್ಯ ಪ್ರದೇಶದಲ್ಲಿ ಎರಡು ದಿನ ಚಿತ್ರೀಕರಣ ನಡೆಸಲು ಅನುಮತಿ ಪಡೆದು ಕೆಲವು ಷರತ್ತುಗಳಿಗೆ ಸಹಿ ಹಾಕಿದೆ.

ಬಂಡೀಪುರದಲ್ಲಿ ಸಾಕ್ಷ್ಯಚಿತ್ರ ಚಿತ್ರೀಕರಣಕ್ಕೆ ಅನುಮತಿ ನೀಡಿರುವುದಕ್ಕೆ ಪರಿಸರ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಡ್ಗಿಚ್ಚು ತಡೆಗೆ ಅರಣ್ಯ ಸಿಬ್ಬಂದಿ ಕಟ್ಟೆಚ್ಚರ ವಹಿಸಿರುವ ಸಂದರ್ಭದಲ್ಲಿಯೇ ಸಾಕ್ಷ್ಯಚಿತ್ರಕ್ಕೆ ಅನುಮತಿ ನೀಡಿರುವುದು ಅವೈಜ್ಞಾನಿಕ ಕ್ರಮ ಎಂದಿದ್ದಾರೆ. (ಕೆ.ಎಸ್, ಎಂ.ಎನ್)

 

Leave a Reply

comments

Related Articles

error: