
ಮೈಸೂರು
ಬಡ್ತಿ ನೀಡದೆ ವಂಚಿಸಿರುವ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಬೇಜವಾಬ್ದಾರಿ ಮತ್ತು ಕರ್ತವ್ಯ ಲೋಪ ಖಂಡಿಸಿ ಪ್ರತಿಭಟನೆ
ಮೈಸೂರು,ಜ.31:- ಮೈಸೂರು ವಿಭಾಗದ ಯಾವೊಬ್ಬ ನೌಕರನಿಗೂ ಬಡ್ತಿ ನೀಡದೆ ವಂಚಿಸಿರುವ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಬೇಜವಾಬ್ದಾರಿ ಮತ್ತು ಕರ್ತವ್ಯ ಲೋಪ ಖಂಡಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಮೈಸೂರು ವಿಭಾಗದ ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರ ಕಛೇರಿ ಎದುರು ಪ್ರತಿಭಟನೆ ನಡೆಯಿತು.
ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ 2007 ರಿಂದ 2011ರವರೆಗೆ ಖಾಲಿ ಇದ್ದ ಶಿರಸ್ತೇದಾರ್/ಉಪ ತಹಶೀಲ್ದಾರ್ ಹುದ್ದೆಗಳಿಗೆ (ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವಿಭಾಗ) ಬೆಂಗಳೂರು, ಬೆಳಗಾವಿ, ಗುಲ್ಬರ್ಗಾ ವಿಭಾಗಗಳಲ್ಲಿ 500ಕ್ಕೂ ಹೆಚ್ಚು ಪ್ರಥಮ ದರ್ಜೆ ಸಹಾಯಕರಿಗೆ ನಿಯಮಾನುಸಾರ ಬಡ್ತಿ ನೀಡಲಾಗಿದೆ. ಆದರೆ ಮೈಸೂರು ವಿಭಾಗದ ಯಾವೊಬ್ಬ ನೌಕರನಿಗೂ ಬಡ್ತಿ ನೀಡದೆ ವಂಚಿಸಿರುವ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಬೇಜವಬ್ದಾರಿ ಮತ್ತು ಕರ್ತವ್ಯ ಲೋಪವೆಸಗಲಾಗಿದೆ ಎಂದು ಆರೋಪಿಸಿದರು.
ಮಂಜೂರಾತಿ ಹುದ್ದೆಗಳ ಪೈಕಿ ಪ.ಜಾ/ಪ.ಪಂ ಹುದ್ದೆಗಳ ವಿವರಗಳ ಜೊತೆಗೆ ಬ್ಯಾಕ್ ಲಾಗ್ ಹುದ್ದೆಗಳನ್ನು ತಿಳಿಸುವ ಅನುಬಂಧ -1ನ್ನು ಕೈಬಿಡಲಾಗಿದೆ. ರೋಸ್ಟರ್ ನಿಯಮಗಳನ್ನು ಪಾಲಿಸುವಾಗ ಮಂಜೂರಾತಿ ಹುದ್ದೆಗಳನ್ನು ಒಂದು ಯುನಿಟ್ ಎಂದು ಪರಿಗಣಿಸುವಂತೆ ಸರ್ವೋಚ್ಛ ನ್ಯಾಯಾಲಯವು ಎಂ.ನಾಗರಾಜು ಪ್ರಕರಣದಲ್ಲಿ ನೀಡಿದ್ದ ಆದೇಶವನ್ನು ಉಲ್ಲಂಘಿಸಲಾಗಿದೆ.ಮಂಜೂರಾದ ಹುದ್ದೆಗಳ ಪೈಕಿ ನೇರ ನೇಮಕಾತಿ ಮತ್ತು ಬಡ್ತಿ ನೇಮಕಾತಿ ಮಾಡಿ ಬಾಕಿ ಉಳಿಯುವ ಪ.ಜಾತಿ/ಪ.ಪಂ.ಹುದ್ದೆಗಳ ಲೆಕ್ಕವನ್ನು ಪ್ರತಿ ಬ್ಲಾಕ್ ನಲ್ಲಿ ನೀಡದೆ ವಂಚಿಸಲಾಗಿದೆ. ಕರ್ನಾಟಕ ರಾಜ್ಯ ಸಿವಿಲ್ ಸೇವಾ ನಿಯಮ 32ರಲ್ಲಿ ಸ್ವತಂತ್ರ ಪ್ರಭಾರದಲ್ಲಿಟ್ಟ ದಿನಾಂಕದಿಂದಲೇ ಸೇವೆಯನ್ನು ಸ್ಥಿರೀಕರಣ ಮಾಡಬೇಕೆಂಬ ಬಗ್ಗೆ 1978ರ ನಿಯಮ 1978ರ ನಿಯಮ 2.3ರಲ್ಲಿ ತಿಳಿಸಲಾಗಿದ್ದರೂ ಪರಿಗಣಿಸದೇ 2006ರಲ್ಲಿ ನಿಯಮ 32ರಡಿ ಸ್ವತಂತ್ರ ಪ್ರಭಾರಕ್ಕೆ ನೇಮಿಸಲ್ಪಟ್ಟ 20ಕ್ಕೂ ಹೆಚ್ಚು ನೌಕರರು ಚಾಮರಾಜನಗರ ಜಿಲ್ಲೆಯೊಂದರಲ್ಲೇ ಅನ್ಯಾಯಕ್ಕೊಳಗಾಗಿದ್ದಾರೆ. ಬಡ್ತಿ ನೀಡುವಾಗ ವಾಗ ಪ.ಜಾ./ಪ.ಪಂ. ಗಳ ಮೀಸಲಾತಿ ಅನುಪಾತವನ್ನು ನಿರ್ವಹಿಸುವುದಕ್ಕಾಗಿ 33ಬಿಂದುಗಳ ರೋಸ್ಟರ್ ವಹಿಯನ್ನು ಕಡ್ಡಾಯವಾಗಿ ನಿರ್ವಹಿಸುವಂತೆ ಸರ್ಕಾರ ಆದೇಶಿಸಿದ್ದರೂ ಇದನ್ನು ಪಾಲಿಸಿರುವುದಿಲ್ಲ. ಮರಣ, ನಿವೃತ್ತಿ, ವಜಾ, ರಾಜಿನಾಮೆ ಕಾರಣಕ್ಕಾಗಿ ತುಂಬದೇ ಉಳಿದಿರುವ ಮಾಹಿತಿಯುಳ್ಳ ರಿಕ್ತ ಸ್ಥಾನಗಳ ವಹಿಯನ್ನು ನಿರ್ವಹಿಸಿರುವುದಿಲ್ಲ. ಬ್ಲಾಕ್ ಅವಧಿಗಳನ್ನು ರಚನೆ ಮಾಡದೆ 1982ರ ಸರ್ಕಾರದ ಆದೇಶವನ್ನು ಉಲ್ಲಂಘಿಸಲಾಗಿದೆ. ಈ ಎಲ್ಲಾ ಲೋಪದೋಷಗಳಿಂದ ಕೂಡಿರುವ ಜೇಷ್ಠತಾ ಪಟ್ಟಿಯನ್ನು ಮರುಪರಿಶೀಲಿಸಿ ಅನ್ಯಾಯಕ್ಕೊಳಗಾದ ನೌಕರರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಮತ್ತು ಸರ್ಕಾರಕ್ಕೆ ದಸಂಸವು ಈ ಹಿಂದೆ ಒತ್ತಾಯಪತ್ರವನ್ನು ಸಲ್ಲಿಸಿದ್ದರೂ ಸಹ ಇದುವರೆವಿಗೂ ಯಾವುದೇ ಕ್ರಮ ಜರುಗಿಸಿರುವುದಿಲ್ಲ
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು 13.01.2020 ರಂದು ಪ್ರಾದೇಶಿಕ ಆಯುಕರುಗಳಿಗೆ ಪತ್ರ ಬರೆದು ಬಡ್ತಿ ಹೊಂದಿದ ದಿನಾಂಕಕ್ಕಿಂತ ಹಿಂದಿನ ದಿನಾಂಕವನ್ನು ಅರ್ಹತಾ ದಿನಾಂಕವನ್ನಾಗಿ ನೀಡುವಂತಿಲ್ಲ ಎಂದು ಗೊಂದಲ ಸೃಷ್ಟಿ ಮಾಡಿದ್ದಾರೆ. ಈ ಹಿಂದೆ ಪ.ಜಾ./ಪ.ಪಂ. ನೌಕರರಿಗೆ ಬಡ್ತಿ ಹೊಂದಿರುವ ದಿನಾಂಕವನ್ನು ಅರ್ಹತಾ ದಿನಾಂಕವೆಂದು ಪರಿಗಣಿಸದೆ ಉದ್ದೇಶಪೂರ್ವಕವಾಗಿ ಅರ್ಹತಾ ದಿನಾಂಕ ಲಭ್ಯವಿಲ್ಲದವರ ಪಟ್ಟಿ ಎಂದು ಹೇಳಿ ಸರ್ವೋಚ್ಛ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿ ಕಂದಾಯ ಇಲಾಖೆಯೊಂದರಲ್ಲಿ 100 ಕ್ಕೂ ಹೆಚ್ಚು ನೌಕರರನ್ನು ಹಿಂಬಡ್ತಿಗೊಳಿಸಿ ಅವಮಾನಿಸಿ, ಅನ್ಯಾಯ ಮಾಡಿ ಕೆಲವು ದಲಿತ ನೌಕರರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿ ಸರ್ವೋಚ್ಛ ನ್ಯಾಯಾಲಯವನ್ನೇ ದಿಕ್ಕುತಪ್ಪಿಸಿರುತ್ತಾರೆ. ಪ್ರಧಾನ ಕಾರ್ಯದರ್ಶಿಗಳ ಪ್ರಕಾರ ಬಡ್ತಿ ಹೊಂದಿದ ದಿನಾಂಕವನ್ನೇ ಅರ್ಹತಾ ದಿನಾಂಕವೆಂದು ಪರಿಗಣಿಸುವುದಾದರೆ ಈ ಹಿಂದೆ ನೀಡಿರುವ ಹಿಂಬಡ್ತಿಗಳು ಕಾನೂನು ಬಾಹಿರವಾಗುವುದಿಲ್ಲವೆ? ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮತ್ತು ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕಲ್ಲವೆ ಎಂದು ಪ್ರಶ್ನಿಸಿದರು.
ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳನ್ನು ಮತ್ತು 2017ರ ಸಾಂದರ್ಭಿಕ ಜೇಷ್ಠತೆಯನ್ನು ಮುಂದುವರೆಸುವ ರಾಜ್ಯ ಸರ್ಕಾರದ ಕಾಯ್ದೆ ಮತ್ತು ಸುತ್ತೋಲೆಗಳನ್ನು ಹಾಗೂ ನಿರ್ದೇಶನಗಳನ್ನು ಉಲ್ಲಂಘಿಸಿ ಜೇಷ್ಠತಾ ಪಟ್ಟಿ ತಯಾರಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ವಂಚಿತರಾಗಿರುವ ಅರ್ಹ ಹಿರಿಯ ನೌಕರರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಚೋರನಹಳ್ಳಿ ಶಿವಣ್ಣ, ಯಡದೊರೆ ಮಹಾದೇವಯ್ಯ, ಕೌಡಳ್ಳಿ ಟಿ.ಎಂ.ಗೋವಿಂದರಾಜ, ಹಾರೋಹಳ್ಳಿ ನಟರಾಜು, ಅರಸಿಕೆರೆ ಶಿವರಾಜ, ಮೂಡಹಳ್ಳಿ ಮಹದೇವ್, ಶಿವರಾಜು, ತಳೂರು ಸಂತೋಷ್, ಶಂಕರ್, ರಾಮಣ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)