ಮೈಸೂರು

ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ತರಲು ವಿದ್ವತ್ ಒಂದು ಅದ್ಭುತ ವೇದಿಕೆ : ಮೇಯರ್ ತಸ್ನೀಂ

ಮೈಸೂರು,ಜ.31:- ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ತರಲು ಒಂದು ವೇದಿಕೆ ಬೇಕಾಗಿದ್ದು, ವಿದ್ವತ್ 2020 ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರ ತರಲು ಇರುವ ಒಂದು ಅದ್ಭುತ ವೇದಿಕೆಯಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ  ಮೇಯರ್ ತಸ್ನೀಂ ತಿಳಿಸಿದರು.

ಅವರಿಂದು ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಮತ್ತು ನಾಳೆ ಏರ್ಪಡಿಸಿರುವ 2 ದಿನಗಳ ರಾಜ್ಯಮಟ್ಟದ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ವತಿಯಿಂದ ಏರ್ಪಡಿಸಿದ್ದ ವಿದ್ವತ್ 2020ರ ಉತ್ಸವವನ್ನು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಜಾಗತೀಕರಣದ ಸಂದರ್ಭದಲ್ಲಿ ವ್ಯಾಪಕವಾದ ಸ್ಪರ್ಧೆ ಜಗತ್ತಿನಾದ್ಯಂತ ನಡೆಯುತ್ತಿದ್ದು ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದಿಸೆಯಲ್ಲೇ ಭವಿಷ್ಯದ ಗೊತ್ತು ಗುರಿಗಳನ್ನು ಇಟ್ಟುಕೊಂಡು, ಅತ್ಯುತ್ತಮವಾದ ಬುದ್ಧಿ ಕೌಶಲ್ಯ, ನಾಯಕತ್ವ ಗುಣ, ಆತ್ಮವಿಶ್ವಾಸ, ಧೃಢ ನಿಶ್ಚಯ, ಧೈರ್ಯ ಮುಂತಾದವುಗಳನ್ನು ಬಲಪಡಿಸಿಕೊಳ್ಳುವ ಮುಖೇನ ಭವಿಷ್ಯದ ಅತ್ಯತ್ತಮ ಪ್ರಜೆಗಳಾಗಿ ಎಂದು ಶುಭ ಹಾರೈಸಿದರು.

ಮೈಸೂರಿನ ವಿದ್ವತ್‍ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಾದ  ರೋಹಿತ್ ಎಂ ಪಾಟೀಲ್‍ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ವತ್ 2020 ಕಾರ್ಯಕ್ರಮಕ್ಕೆ ಶುಭ ಕೋರಿದರು.

ವಿದ್ಯಾವರ್ಧಕ ಸಂಘದ ಗೌ.ಅಧ್ಯಕ್ಷರಾದ  ಗುಂಡಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ  ಇಂದಿನ ಸ್ಪರ್ಧಾತ್ಮಕ ಕಾರ್ಪೋರೇಟ್‍ ಜಗತ್ತು ಬಯಸುವ ಹೆಚ್ಚಿನ ಮಟ್ಟದ ವ್ಯಕ್ತಿತ್ವ, ಕೌಶಲ್ಯ, ನೈಪುಣ್ಯತೆ ಮತ್ತು ಕಾರ್ಯಕ್ಷಮತೆಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುವಲ್ಲಿ ಈ ರೂಪದ ವೇದಿಕೆಗಳು ಸಹಕಾರಿಯಾಗುತ್ತವೆ ಎಂಬುದು ನನ್ನ ನಂಬಿಕೆ. ಈ ದಿಕ್ಕಿನಲ್ಲಿ  “ವಿದ್ವತ್ 2020” ಎರಡು ದಿವಸಗಳ ಕಾರ್ಯಕ್ರಮ ಯಶಸ್ವಿಯಾಗಿ ಜರುಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ  ಶಿವರಾಜು ಪ್ರಾರ್ಥಿಸಿ, ಹರ್ಷಿತ.ಎಸ್.ಯು ಸ್ವಾಗತಿಸಿದರು. ಪ್ರಾಚಾರ್ಯ ಡಾ.ಎಸ್.ಮರೀಗೌಡ  ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೌ.ಕಾರ್ಯದರ್ಶಿ ಪಿ. ವಿಶ್ವನಾಥ್, ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ  ಟಿ.ನಾಗರಾಜು, ವಿಭಾಗ ಮುಖ್ಯಸ್ಥರಾದ ಪ್ರೊ.ಬಿ.ಎಂ.ಮಂಜುಳ,ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಕಾಲೇಜುಗಳಿಂದ ಆಗಮಿಸಿದ್ದ 500ಕ್ಕೂ ಹೆಚ್ಚಿನ ಸ್ಪರ್ಧಾರ್ಥಿಗಳು, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

ಸುಚಿತ್ರ ಭೋಜಮ್ಮ ನಿರೂಪಿಸಿ, ಚೈತನ್ಯ ವಂದಿಸಿದರು. (ಎಸ್.ಎಚ್)

Leave a Reply

comments

Related Articles

error: