ಪ್ರಮುಖ ಸುದ್ದಿ

 ಚಿತ್ರಕಲೆ ಮತ್ತು ಛದ್ಮವೇಷ ಸ್ಪರ್ಧೆ : ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಿ : ಸಿವಿಲ್ ನ್ಯಾಯಧೀಶೆ ನೂರುನ್ನಿಸ ಸಲಹೆ

ರಾಜ್ಯ(ಮಡಿಕೇರಿ) ಫೆ.1:- ಪೋಷಕರು ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು. ಬೇರೆ ಮಕ್ಕಳೊಡನೆ ತಮ್ಮ ಮಕ್ಕಳನ್ನು ಹೋಲಿಸುವ ಕಾರ್ಯವನ್ನು ಮಾಡಬಾರದು ಎಂದು ಜಿಲ್ಲಾ ಸಿವಿಲ್ ನ್ಯಾಯಧೀಶರಾದ ನೂರುನ್ನಿಸ ಅವರು ತಿಳಿಸಿದರು.

ಜಿಲ್ಲಾ ಬಾಲಭವನ ಸಮಿತಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ  ನಗರದ ಶಿಶುಕಲ್ಯಾಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಚಿತ್ರಕಲೆ ಮತ್ತು ಛಧ್ಮವೇಷ ಸ್ಪರ್ಧೆಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿರುವ ಕಲೆಯನ್ನು ಹೊರತರಲು ಮತ್ತು ಸರ್ಕಾರಿ ಹಾಗೂ ಗ್ರಾಮೀಣ ಭಾಗದ ಮಕ್ಕಳಲ್ಲಿನ ಪ್ರತಿಭೆಯನ್ನು ಹೊರಹಾಕಲು ಇಂತಹ ವೇದಿಕೆಗಳು ಬಹು ಸಹಕಾರಿ ಎಂದರು. ಇಂತಹ ವೇದಿಕೆಯನ್ನು ಎಲ್ಲಾ ಮಕ್ಕಳು ಸದುಪಯೋಗ ಪಡಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿ ಸಂತೋಷ ಪಡುವಂತೆ ಕರೆ ನೀಡಿದರು.

ಪೋಷಕರು ಮಕ್ಕಳಿಗೆ ಪ್ರಶಸ್ತಿಯನ್ನು ಪಡೆಯಲೇಬೇಕೆಂದು ಒತ್ತಡವನ್ನು ಹಾಕದೆ, ಅವರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಬೇಕು ಎಂದರು.

ದೇಶಕ್ಕೆ ತನ್ನದೇ ಆದ ಸಾಂಸ್ಕೃತಿಕ ಪರಂಪರೆಯಿದೆ. ಒಬ್ಬರು ಮತ್ತೊಬ್ಬರಲ್ಲಿನ ಒಳ್ಳೆಯ ಗುಣಗಳನ್ನು ಹುಡುಕಿ, ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಇನ್ನೊಬ್ಬರನ್ನು ಟೀಕಿಸುವ ಮತ್ತು ಪರರ ತಪ್ಪುಗಳನ್ನೆ ಹುಡುಕುವ ಕಾರ್ಯ ಮಾಡಬಾರದು ಎಂದರು.

ಮಾನವೀಯ ಮೌಲ್ಯಗಳುಳ್ಳ ಆಂತರಿಕ ಶ್ರೀಮಂತಿಕೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ಒಳ್ಳೆಯ ಆಲೋಚನೆ, ಶಾಂತಿ, ನೆಮ್ಮದಿಯಿಂದ ನೀವು ಜೀವನ ನಡೆಸುವಂತಾಗಲಿ ಎಂದು ಆಶಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಅರುಂಧತಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ನಮ್ಮ ಇಲಾಖೆ ಪ್ರತೀ ವರ್ಷ ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುವುದಲ್ಲದೆ ಅವರಲ್ಲಿನ ಸೂಕ್ತ ಪ್ರತಿಭೆಯನ್ನು ನಾವು ಗುರುತಿಸಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗಾಗಿ ಚಿತ್ರಕಲೆ ಹಾಗೂ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಿದ್ದೇವೆ. ಸೋಲು-ಗೆಲುವಿನ ಬಗ್ಗೆ ಯೋಚಿಸದೆ, ಸೋತರೂ ಬೇಸರ ಪಟ್ಟುಕೊಳ್ಳದೆ ಸಂತೋಷದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದರು.

ಸಿ.ಡಬ್ಲ್ಯೂ.ಸಿ ಅಧ್ಯಕ್ಷರಾದ ಸೂರಜ್ ಅವರು ಮಾತನಾಡಿ, ಕಲೆಯನ್ನು ಅನಾವರಣಗೊಳಿಸಲು ಈ ವೇದಿಕೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಆರ್ಥರ್ ವಿಲಿಯಂ ಜೀವನದ ನಿದರ್ಶನವನ್ನು ಮಕ್ಕಳಿಗೆ ತಿಳಿಸಿ, ಕಲೆಯನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು. ನೀವು ನಿಮ್ಮಲ್ಲಿನ ಕಲೆಯನ್ನು ಸಮಾಜಕ್ಕೆ ಉಪಯೋಗವಾಗುವಂತೆ ಬಳಸಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಬಾಲಮಂದಿರದ ಆಪ್ತ ಸಮಾಲೋಚಕರಾದ ನಾಗಭೂಷಣ್, ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ, ಸಂಪನ್ಮೂಲ ವ್ಯಕ್ತಿಗಳಾದ ಭರತ್ ಕೋಡಿ, ಪ್ರಸನ್ನ, ಇಂದ್ರಾಣಿ, ರೇವತಿ ರಮೇಶ್, ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ ಸೇರಿದಂತೆ ಇತರರು ಭಾಗಿಯಾಗಿದ್ದರು.

ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧೀಕ್ಷಕರಾದ ಮಹೇಶ್ ಸ್ವಾಗತಿಸಿದರು. ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತಾ ವಂದಿಸಿದರು. ಪೂಜಾ ಅವರು ಕಾರ್ಯಕ್ರಮ ನಿರ್ವಹಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: