ದೇಶಪ್ರಮುಖ ಸುದ್ದಿ

ಕೇಂದ್ರ ಬಜೆಟ್: ಕೃಷಿ, ಗ್ರಾಮೀಣ ಅಭಿವೃದ್ಧಿ 16 ಅಂಶಗಳ ಯೋಜನೆ

ನವದೆಹಲಿ,ಫೆ.1 ಈ ಸಾಲಿನ ಬಜೆಟ್ ಮಂಡಿಸುತ್ತಿರುವ ಸಚಿವೆ ನಿರ್ಮಲಾ ಸೀತಾರಾಮನ್ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ 16 ಅಂಶಗಳ ಯೋಜನೆಯನ್ನು ಮುಂಗಡ ಪತ್ರದಲ್ಲಿ ಘೋಷಿಸಿದರು.

ಗ್ರಾಮೀಣ ಭಾಗದ ಕೃಷಿ ಚಟುವಟಿಕೆಗಳಿಗೆ 2.83 ಲಕ್ಷ ಕೋಟಿ ರೂ. ಗೂ ಹೆಚ್ಚು ಮೊತ್ತ ಘೋಷಣೆ ಮಾಡಿದರು. ಇದರಲ್ಲಿ ಕೃಷಿಗೆ 1.6 ಲಕ್ಷ ಕೋಟಿ ರೂ. ಮೀಸಲು ಮತ್ತು ಗ್ರಾಮೀಣ ಕೃಷಿ ಚಟುವಟಿಕೆ ಅಭಿವೃದ್ಧಿಗೆ 1.23 ಲಕ್ಷ ಕೋಟಿ ರೂ. ಮೀಸಲು ಇಟ್ಟಿರುವುದಾಗಿ ತಿಳಿಸಿದರು.

ಕೃಷಿ ಉತ್ಪನ್ನಗಳ ಸಾಗಣೆಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಕೃಷಿ ಉಡಾನ್‌ ಮತ್ತು ಕೃಷಿ ರೈಲು ಎಂಬ ವಿಭಿನ್ನ ಯೋಜನೆಗಳನ್ನು ಘೋಷಿಸಿದರು.

ಹೆಚ್ಚು ನೀರನ್ನು ಆಶ್ರಯಿಸುವ ಬೆಳೆಗಳ ಬದಲಿಗೆ ವೈವಿಧ್ಯಮಯ ಆಹಾರ ಧಾನ್ಯಗಳ ಉತ್ಪಾದನೆಗೆ ಹೆಚ್ಚು ಉತ್ತೇಜನ ನೀಡಲಾಗಿದ್ದು, ಬರಡು ಭೂಮಿಯಲ್ಲಿ ಸಾವಯವ ಕೃಷಿಗೆ ಹಣಕಾಸು ನೆರವು ನೀಡುವುದಾಗಿ ಘೋಷಿಸಿದರು. ಪ್ರಧಾನ ಮಂತ್ರಿ ಕೃಷಿ ಸಮ್ಮಾನ್‌ ಯೋಜನೆ ಸೇರಿದಂತೆ ಹಲವು ಕೃಷಿ ಪರ ಯೋಜನೆಗಳು ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡಿವೆ ಎಂದ ಅವರು, ಪಂಪ್‌ಸೆಟ್‌ಗಳಿಗೆ ಸೋಲಾರ್‌ ಶಕ್ತಿ ಒದಗಿಸುವ ಯೋಜನೆ ಘೋಷಣೆ ಮಾಡಿದರು. ರೈತರು ಅನ್ನದಾತರು ಮಾತ್ರವಲ್ಲ, ವಿದ್ಯುತ್‌ದಾತರೂ ಹೌದು. ರೈತರು ಉತ್ಪಾದಿಸುವ ಹೆಚ್ಚುವರಿ ವಿದ್ಯುತ್‌ ಅನ್ನು ಗ್ರಿಡ್‌ ಮೂಲಕ ಸರ್ಕಾರವೇ ಖರೀದಿಸಲಿದೆ. ಈ ಮೂಲಕ ಬರಡು ಭೂಮಿಯಲ್ಲೂ ರೈತರು ಆದಾಯಗಳಿಸುವ ಅವಕಾಶ ಸಿಗಲಿದೆ ಎಂದರು.

ಮಹಿಳಾ ಕೃಷಿಕರನ್ನು ಉತ್ತೇಜಿಸಲು ಧಾನ್ಯ ಲಕ್ಷ್ಮೀ ಯೋಜನೆಯನ್ನು ಮಂಡಿಸಿದ ಸೀತಾರಾಮನ್‌, ಮಹಿಳೆಯರನ್ನು ಧಾನ್ಯ ಲಕ್ಷ್ಮೀ ಎಂದು ಬಣ್ಣಿಸಿ ಬೀಜ ಸಂರಕ್ಷಣೆಗೆ ಮುಂದಾಗಲು ಮಹಿಳಾ ಸ್ವಸಹಾಯ ಸಂಘಗಳಿಗೆ ಧನ ಸಹಾಯ ಮಾಡಲಾಗುವುದು. ಬೀಜ ಸಂರಕ್ಷಣೆಗೆ ಮುಂದೆ ಬರುವ ಯುವ ಮಹಿಳಾ ಉದ್ಯಮಿಗಳಿಗೆ ಮುದ್ರಾ ಯೋಜನೆಯಡಿ ನೆರವು ನೀಡುವ ಭರವಸೆ ನೀಡಿದರು.

ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಯೋಜನೆಗೆ ಎಲ್ಲ ರೈತರನ್ನು ಸೇರ್ಪಡೆಗೊಳಿಸುವ ಬಗ್ಗೆ ಹೇಳಿದ ಸೀತಾರಾಮನ್‌, 2020-21ರ ಸಾಲಿಗೆ 15 ಲಕ್ಷ ಕೋಟಿ ರೂ. ಕೃಷಿ ಸಾಲದ ಗುರಿ ಹೊಂದಲಾಗಿದೆ. ಜಾನುವಾರುಗಳ ಕಾಲುಬಾಯಿ ರೋಗ, ಪಿಪಿಪಿ ಕಾಯಿಲೆ ಮುಕ್ತ ಭಾರತ ಘೋಷಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಡಲಾಗಿದ್ದು, ಹಾಲು ಉತ್ಪಾದನೆಯನ್ನು 53.5 ಟನ್‌ನಿಂದ 108 ಟನ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.

ದೀನ್‌ ದಯಾಳ್‌ ಅಂತ್ಯೋದಯ ಯೋಜನೆ ಮೂಲಕ 58 ಲಕ್ಷ ಸ್ವಸಹಾಯ ಸಂಘಗಳನ್ನು ಆರಂಭಿಸಿ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗುವುದು. ಮೀನು ಉತ್ಪಾದನೆಗೆ ಹೊಸ ತಂತ್ರಜ್ಞಾನಗಳ ಬಳಕೆಗೆ ಒತ್ತು ನೀಡಲಾಗುವುದು. ಸುಮಾರು 200 ಲಕ್ಷ ಟನ್‌ ಮೀನು ಉತ್ಪಾದನೆಯ ಗುರಿ ಹೊಂದಲಾಗಿದೆ. ಗ್ರಾಮೀಣ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಸಾಗರ್‌ ಮಿತ್ರ ಯೋಜನೆ ಮತ್ತು ಮೀನು ಉತ್ಪಾದಕ ಸಂಸ್ಥೆಗಳ ಬಲವರ್ಧನೆ ಮಾಡಲಾಗುವುದು ಎಂದರು. (ಎಂ.ಎನ್)

 

Leave a Reply

comments

Related Articles

error: