ಕರ್ನಾಟಕಪ್ರಮುಖ ಸುದ್ದಿ

ಶಾಲಾ ಮಕ್ಕಳ ಸಾವು : ಪೊಲೀಸ್ ಠಾಣೆ ಎದುರು ಪ್ರತಿಭಟನೆ, ಪೋಷಕರ ಆಕ್ರೊಶ

ತುಮಕೂರು : ಅನುಮತಿ ಇಲ್ಲದೆ ಹಾಸ್ಟೆಲ್ ನಡೆಸಿ ಸಮರ್ಪಕ ಮೇಲುಸ್ತುವಾರಿ ಇಲ್ಲದೆ ಮೂರು ಅಮಾಯಕ ಮಕ್ಕಳನ್ನು ಬಲಿ ತೆಗೆದುಕೊಂಡ ಶಾಲಾ ಆಡಳಿತ ಮಂಡಳಿಯ ವಿರುದ್ಧ ಐಪಿಸಿ 304(ಎ) ಅಡಿ ದುರ್ಬಲ ಪ್ರಕರಣ ದಾಖಲಾಗಿದ್ದು, ತಕ್ಷಣ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಮೃತ ಮಕ್ಕಳ ರಕ್ತ ಸಂಬಂಧಿಕರು ಹುಳಿಯಾರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು.

ಇದು ಕೊಲೆಗೆ ಸಮನಾದ ಕೃತ್ಯ : ಮೃತ ಬಾಲಕ ಶ್ರೇಯಸ್ ಅವರ ತಾತ ರಂಗಪ್ಪ ಅವರು ಮಾತನಾಡಿ, ಮಕ್ಕಳಿಗೆ ವಿಷಪ್ರಾಶನವಾಗಿದ್ದರೂ ಪ್ರಥಮ ಚಿಕಿತ್ಸೆ ಕೊಡಿಸುವಲ್ಲಿ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ. ತುಮಕೂರು ಆಸ್ಪತ್ರೆಗೆ ನಮ್ಮ ಮಕ್ಕಳನ್ನು ಕರೆದೊಯ್ಯುವಷ್ಟರಲ್ಲಿ ಬೆಳಗಿನ ಜಾವ 4 ಗಂಟೆಯಾಗಿತ್ತು. ಅದೂ ಮೃತ ದೇಹವನ್ನು ತೆಗೆದುಕೊಂಡು ಹೋಗಿದ್ದಾರೆ.

ಪೋಷಕರಿಗೆ ಒಂದೇ ಒಂದು ಪೋನ್ ಮಾಡಿದ್ದರೂ ಓಡೋಡಿ ಬಂದು ಎಷ್ಟು ಖರ್ಚಾಗಿದ್ದರೂ ಉಳಿಸಿಕೊಳ್ಳುತ್ತಿದ್ದೆವು. ನಮ್ಮ ಮಕ್ಕಳು ವಿಷಾಹಾರ ಸೇವಿಸಿದ್ದಾರೆ ಎಂದು ಗೊತ್ತಾದ ತಕ್ಷಣ ದೂರವಾಣಿ ಕರೆ ಸಹ ಮಾಡದೆ, ಪ್ರಥಮ ಚಿಕಿತ್ಸೆ ಸಹ ಕೊಡಿಸದೆ ನಮ್ಮ ಮಕ್ಕಳನ್ನು ಕೊಲೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ಆರಂಭ : ಹುಳಿಯಾರು ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್‌ನ ಹಾಸ್ಟೆಲ್‌ನಲ್ಲಿ ಸಾಂಬರಿಗೆ ವಿಷ ಹಾಕಿ 3 ಮುಗ್ಧ ಬಾಲಕರನ್ನು ಬಲಿ ಪಡೆದವರ ಪತ್ತೆಗೆ ತಿಪಟೂರು ಡಿವೈಎಸ್‌ಪಿ ವೇಣುಗೋಪಾಲ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.

ಹಾಸ್ಟಲ್‌ನ ಅಡುಗೆ ಕೋಣೆ ದನದ ಕೊಟ್ಟಿಗೆಗಿಂತಲೂ ಕಡೆಯಾಗಿದ್ದು ಸ್ವಚ್ಛತೆ ಇಲ್ಲದಾಗಿತ್ತು. ಇಲಿ, ಹೆಗ್ಗಣ, ಜಿರಲೆಗಳ ಆವಾಸ ತಾಣವಾಗಿತ್ತು. ಅಲ್ಲದೆ ಶಾಲಾ ಕಟ್ಟಡದ ಪಕ್ಕದಲ್ಲಿ ದನದ ಕೊಟ್ಟಿಗೆಯಂತೆ ಅಡುಗೆ ಕೋಣೆ ನಿರ್ಮಿಸಿದ್ದು, ಹಾಸ್ಟೆಲ್ ಒಳಗಿರುವವರಿಗೆ ತಿಳಿಯದಂತೆ ಅಡುಗೆ ಕೋಣೆ ಒಳಗೆ ಸುಲಭವಾಗಿ ಬಂದು ಹೋಗಬಹುದಾಗಿತ್ತು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯವರೂ ಸಹ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ರಾತ್ರಿ 8ರ ಸುಮಾರಿನಲ್ಲಿ ಹಾಸ್ಟೆಲ್ ಮುಂಭಾಗದ ಕಾಂಪೌಂಡ್ ಹತ್ತಿರ ಸ್ಕೂಟಿಯಲ್ಲಿ ಇಂಡಿಕೇಟರ್ ಹಾಕಿಕೊಂಡು ಬಹಳ ಸಮಯ ಅಪರಿಚಿತ ವ್ಯಕ್ತಿಯೊಬ್ಬರು ನಿಂತಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಮಾತ್ರವಲ್ಲ ಸಾಂಬಾರ್‍ನಲ್ಲಿ ‌ವಿಷ ಹಾಕಲಾಗಿದೆಯಾ ಎಂಬುದರ ಬಗ್ಗೆಯೂ ತನಿಖೆ‌ ಮುಂದುವರೆದಿದೆ.

(ಎಸ್‍.ಎನ್‍/ಎನ್‍.ಬಿಎನ್‍)

Leave a Reply

comments

Related Articles

error: