ಪ್ರಮುಖ ಸುದ್ದಿ

ಜಂತುಹುಳು ನಿವಾರಣಾ ಕಾರ್ಯಕ್ರಮ : ತರಬೇತಿ ಕಾರ್ಯಾಗಾರ

ರಾಜ್ಯ( ಮಡಿಕೇರಿ) ಫೆ.3:- ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರವು ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆಸಲಾಯಿತು.
ಕಾರ್ಯಾಗಾರದಲ್ಲಿ ಮಕ್ಕಳ ಆರೋಗ್ಯ ಅಧಿಕಾರಿಗಳಾದ ಡಾ.ಗೋಪಿನಾಥ್ ಅವರು ಮಾತನಾಡಿ, ಫೆ.10 ರಂದು ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
1 ರಿಂದ 19 ವರ್ಷದ ಎಲ್ಲಾ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡಬೇಕಿದೆ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಸಂಬಂಧಿಸಿದ ನೋಡೆಲ್ ಅಧಿಕಾರಿಗಳು, ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಾಂಶುಪಾಲರುಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಎಂದರು.
ತರಬೇತಿ ಕಾರ್ಯಾಗಾರದಲ್ಲಿ ವಿರಾಜಪೇಟೆ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಯತಿರಾಜ್ ಅವರು ಮಾತನಾಡಿ, 1 ರಿಂದ 19 ವರ್ಷದೊಳಗಿನ ಎಲ್ಲಾ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಯನ್ನು ನೀಡಬೇಕು. ಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಮಾತ್ರೆಗಳನ್ನು ನೀಡಲಾಗಿದೆ ಎಂದರು.
ಜಂತುಹುಳುಗಳಲ್ಲಿ ಮುಖ್ಯವಾಗಿ 3 ವಿಧದ ಜಂತುಹುಳುಗಳನ್ನು ನಾವು ಕಾಣುತ್ತೇವೆ. ಅವುಗಳೆಂದರೆ ಕೊಕ್ಕೆ ಹುಳು, ಚಾಟಿ ಹುಳು ಮತ್ತು ದುಂಡುಹುಳು. ಮಾನವನ ಕರುಳಿನ ಮೇಲಿನ ಪೌಷ್ಟಿಕಾಂಶದಿಂದಾಗಿ ಈ ಹುಳುಗಳು ಬೆಳವಣೆಗೆಯನ್ನು ಹೊಂದುತ್ತವೆ ಎಂದು ತಿಳಿಸಿದರು.
ಈ ಜಂತುಹುಳಗಳಿಂದ ಮಕ್ಕಳ ಆರೋಗ್ಯದಲ್ಲಿ ಸಾಕಷ್ಟು ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ. ಅತಿಸಾರ, ಹೊಟ್ಟೆನೋವು, ವಾಂತಿ, ದೌರ್ಬಲ್ಯ ಮತ್ತು ಹಸಿವಾಗದೆ ಇರುವಂತಹ ಲಕ್ಷಣಗಳು ಕಂಡುಬರುತ್ತವೆ. ಇದರ ಪರಿಣಾಮವಾಗಿ ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಠಿಕತೆ, ಭೌದ್ಧಿಕ ಬೆಳವಣಿಗೆ ಕುಂಠಿತವಾಗುತ್ತದೆ. ಕರುಳಿನಲ್ಲಿರುವ ಜಂತುಹುಳು ವಿಟಮಿನ್ ‘ಎ’ ಕೊರತೆಗೆ ಕಾರಣವಾಗುತ್ತದೆ. ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ತೀವ್ರ ಅಡ್ಡಿಪಡಿಸುತ್ತವೆ ಎಂದರು.
ಜಂತುಹುಳು ನಿವಾರಣಾ ಕಾರ್ಯಕ್ರಮ ಮಾಡುವುದರಿಂದಾಗಿ ಶಾಲೆಗಳಲ್ಲಿ ಹಾಜರಾತಿಯ ಪ್ರಮಾಣವು ಶೇ.25 ರಷ್ಟು ಹೆಚ್ಚಳವಾಗಿದೆ ಎಂದರು. ದೈಹಿಕ ಶುಚಿತ್ವ, ಹಣ್ಣು ತರಕಾರಿಗಳನ್ನು ಶುದ್ಧವಾದ ನೀರಿನಿಂದ ತೊಳೆದು ನಂತರ ಬಳಸುವುದು, ಮುಚ್ಚಿದ ಆಹಾರದ ಸೇವನೆಯಿಂದಾಗಿ ಜಂತುಹುಳು ಬಾಧೆಯಿಂದ ದೂರವಿರಬಹುದು ಎಂದರು.
ಮುಖ್ಯವಾಗಿ ಶಾಲೆ ಮತ್ತು ಅಂಗನವಾಡಿಗಳಲ್ಲಿ ಕಾರ್ಯಕ್ರಮ ಮಾಡುವುದರಿಂದ, ಏಕ ಕಾಲಕ್ಕೆ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ತಲುಪಲು ಸಹಕಾರಿಯಾಗುತ್ತದೆ. ಆದ್ದರಿಂದ ಶಿಕ್ಷಕರೊಡನೆ ಸಮನ್ವಯ ಸಾಧಿಸಿ ಸೂಕ್ತ ರೀತಿಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕೋರಿದರು.
ಶಾಲೆ ಬಿಟ್ಟ ಮಕ್ಕಳನ್ನೂ ಸಹ ಪತ್ತೆಹಚ್ಚಿ ಅವರಿಗೂ ಸಹ ಜಂತುಹುಳು ಮಾತ್ರೆಗಳನ್ನು ನೀಡುವ ಕಾರ್ಯ ಮಾಡಿ. ಈ ಮಾತ್ರೆಗಳನ್ನು ನೀಡುವುದರಿಂದಾಗಿ ಮಕ್ಕಳಲ್ಲಿ ಜಂತುಹುಳು ಸಮಸ್ಯೆ ನಿವಾರಣೆ ಮಾಡಿ ಅವರ ದೈಹಿಕ ವಿಕಾಸ ಮತ್ತು ಮಾನಸಿಕ ಬೆರಳವಣಿಗೆಗೆ ಸಹಕಾರ ನೀಡಬಹುದು ಎಂದರು. ರಕ್ತಹೀನತೆ, ಮತ್ತಿತರ ಖಾಯಿಲೆಗಳಿಂದ ಮಕ್ಕಳನ್ನು ಮುಕ್ತರನ್ನಾಗಿಸಬಹುದು ಎಂದರು.
ಕಾರ್ಯಾಗಾರದಲ್ಲಿ ಸೋಮವಾರಪೇಟೆ ತಾಲೂಕಿನ ಆರೋಗ್ಯಾಧಿಕಾರಿಗಳಾದ ಡಾ.ಶ್ರೀನಿವಾಸ್ ಮತ್ತು ಜಿಲ್ಲೆಯ ಪ್ರಾಥಮಿಕ ಕೇಂದ್ರಗಳ ವೈದ್ಯಾಧಿಕಾರಿಗಳು ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: