ಮೈಸೂರು

ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ಯೋಗಾಸಕ್ತರಿಂದ 108 ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞ

ಮೈಸೂರು,ಫೆ.3:- ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ರಥಸಪ್ತಮಿ ಅಂಗವಾಗಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ನಿನ್ನೆ ಯೋಗಾಸಕ್ತರಿಂದ 108 ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞ ನಡೆಯಿತು.

ಸಮಿತಿ ಯೋಗಗುರು ಪ್ರಕಾಶ್ ಮಾರ್ಗದರ್ಶನದಲ್ಲಿ 250ಕ್ಕೂ ಹೆಚ್ಚು ಯೋಗಾಸಕ್ತರು ಸಮವಸ್ತ್ರಧಾರಿಗಳಾಗಿ ಮೂರು ಹಂತದಲ್ಲಿ ಒಂದೂವರೆ ತಾಸಿನ ಅವಧಿಯಲ್ಲಿ 108 ಬಾರಿ ವಿವಿಧ ಆಸನಗಳನ್ನು ಪ್ರದರ್ಶಿಸುವ ಮೂಲಕ ಸೂರ್ಯ ದೇವನಿಗೆ ಭಕ್ತಿ ಪೂರ್ವಕ ನಮನ ಸಲ್ಲಿಸಿದರು.

ಮೂರು ಹಂತದಲ್ಲಿ ತಲಾ 36 ಸೂರ್ಯ ನಮಸ್ಕಾರ ಮಾಡಿದರು. 5 ನಿಮಿಷ ವಿರಾಮದ ವೇಳೆಯಲ್ಲಿ ಯೋಗಪಟುಗಳಿಗೆ ದಣಿವು, ಆಯಾಸ ನೀಗಿಸಲು ಕಲ್ಲು ಸಕ್ಕರೆ, ಬೆಲ್ಲ ವಿತರಿಸಲಾಯಿತು.  ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರಯ್ಯ, ಸಂಸ್ಕಾರಯುತ ಸಮಾಜ ನಿರ್ಮಾಣಕ್ಕಾಗಿ ಪೂರ್ವಿಕರ ವೈಜ್ಞಾನಿಕ ಆಚಾರ, ವಿಚಾರಗಳ ಭವ್ಯ ಪರಂಪರೆಯನ್ನು ನೆನೆಯುವ ಕಾರ್ಯ ಇದಾಗಿದೆ. ಈ ದಿಸೆಯಲ್ಲಿ ಉತ್ತಮ ಸಮಾಜ ಕಟ್ಟುವ ಕಾಯಕದಲ್ಲಿ ಸಮಿತಿ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ಯೋಗ ಗುರು ಪ್ರಕಾಶ್ ಮಾತನಾಡಿ, ಮನುಷ್ಯ ಉಸಿರಾಟ ಕ್ರಿಯೆಯ ಮಹತ್ವವನ್ನೇ ಮರೆತು ಜೀವಿಸುತ್ತಿದ್ದಾನೆ. ಗೌತಮ ಬುದ್ಧ ಉಸಿರಾಟದ ಮಹತ್ವವನ್ನು ಜಗತ್ತಿಗೆ ಸಾರುವ ಮೂಲಕ ಧ್ಯಾನದ ಪರಿಕಲ್ಪನೆಯನ್ನು ಸಮಾಜಕ್ಕೆ ಕೊಟ್ಟು ಹೋಗಿದ್ದಾರೆ. ನಾವು ಮಾಡುವ ಪ್ರತಿಯೊಂದು ಕ್ರಿಯೆಯಲ್ಲೂ ಉಸಿರಾಟದ ಏರಿಳಿತದ ಅರಿವು ನಮಗಿದ್ದಾಗ ಮಾತ್ರ ಯೋಗಿಯಾಗಲು ಸಾಧ್ಯ ಎಂದು ಹೇಳಿದರು. ಮಕ್ಕಳನ್ನು ಬಾಲ್ಯದಿಂದಲೇ ಸಂಸ್ಕಾರಯುತರನ್ನಾಗಿ ಮಾಡಲು ಧ್ಯಾನ, ಯೋಗ ಸಹಕಾರಿ. ಈ ದಿಸೆಯಲ್ಲಿ ನಮ್ಮೆಲ್ಲರ ಚಿತ್ತ ಹರಿಯಬೇಕು ಎಂದು ಆಶಿಸಿದರು

ಈ ಸಂದರ್ಭ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ವಿ.ರೇವಣ್ಣ, ಕಾರ್ಯದರ್ಶಿ ಗಣೇಶ್‌ಮೂರ್ತಿ ಸೇರಿದಂತೆ ಶಾಖಾ ಪ್ರಮುಖರು ಹಾಗೂ ಯೋಗಶಿಕ್ಷಕರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: