ಮೈಸೂರು

ಎನ್‌ಪಿಆರ್‌-ಎನ್‌ಆರ್‌ಸಿ-ಸಿಎಎ ಕಾಯಿದೆ ಗಳು ಮಾನ್ಯತೆ ಇಲ್ಲದ ಕಳ್ಳ ವಿವಾಹದಂತೆ ಅಸ್ತಿತ್ವಕ್ಕೆ ಬಂದಿವೆ : ಪ್ರೊ.ರವಿವರ್ಮಕುಮಾರ್‌ ಟೀಕೆ

ಮೈಸೂರು, ಫೆ.3:-  ”ಎನ್‌ಪಿಆರ್‌-ಎನ್‌ಆರ್‌ಸಿ-ಸಿಎಎ ಕಾಯಿದೆ ಗಳು ಮಾನ್ಯತೆ ಇಲ್ಲದ ಕಳ್ಳ ವಿವಾಹದಂತೆ ಅಸ್ತಿತ್ವಕ್ಕೆ ಬಂದಿವೆ. ಇವುಗಳ ಬಗ್ಗೆ ಸಂವಿಧಾನದಲ್ಲಿಹಾಗೂ ನಾಗರಿಕ ಹಕ್ಕುಗಳ ಕಾಯಿದೆಯಲ್ಲಿಯಾವುದೇ ಪ್ರಸ್ತಾಪವಿಲ್ಲ. ಶಾಸನಾತ್ಮಕ ಬೆಂಬಲವೂ ಈ ಕಾಯಿದೆಗೆ ಇಲ್ಲ ಎಂದು ರಾಜ್ಯ ಸರಕಾರದ ವಿಶ್ರಾಂತ ಅಡ್ವೋಕೇಟ್‌ ಜನರಲ್‌ ಪ್ರೊ.ರವಿವರ್ಮಕುಮಾರ್‌ ಟೀಕಿಸಿದರು.

ಅವರು ನಿನ್ನೆ ಮೈಸೂರು ನಗರ, ಗ್ರಾಮಾಂತರ ಜಿಲ್ಲಾಕಾಂಗ್ರೆಸ್‌ ವತಿಯಿಂದ  ಕಾಂಗ್ರೆಸ್‌ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಅಸಾಂವಿಧಾನಿಕ ಹಾಗೂ ತಾರತಮ್ಯದ ಎನ್‌ಪಿಆರ್‌-ಎನ್‌ಆರ್‌ಸಿ-ಸಿಎಎ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು. ಸಂವಿಧಾನದಲ್ಲಿ, ಪೌರತ್ವ ಕಾಯಿದೆಯಲ್ಲಿ ಪ್ರಸ್ತಾಪವಿರದ ಎನ್‌ಪಿಆರ್‌-ಎನ್‌ಆರ್‌ಸಿ-ಸಿಎಎ ಕಾಯಿದೆಗೆ ಕಾನೂನಿನಲ್ಲಿ ಯಾವುದೇ ಮಾನ್ಯತೆ ಇಲ್ಲ. ಹೀಗಿರುವಾಗ ಬಿಜೆಪಿ ಸರಕಾರ ಅನವಶ್ಯಕವಾಗಿ, ಮತ ಬ್ಯಾಂಕ್‌ ರಾಜಕಾರಣಕ್ಕೆ ಈ ಕಾಯಿದೆಗಳನ್ನು ಜಾರಿಗೆ ತರಲು ಹೊರಟಿವೆ. ಈ ಕಾಯಿದೆಗಳು ಭಾರತೀಯ ಸಂವಿಧಾನಕ್ಕೆ ವಿರುದ್ಧವಾಗಿವೆ ಹಾಗೂ ತಾರತಮ್ಯದಿಂದ ಕೂಡಿವೆ. ಈ ಅಂಶಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ  ಎಂದು ತಿಳಿಸಿದರು.

ಸಂವಿಧಾನ ಸಮಾನತೆ ಸಂದೇಶ ಸಾರಿದೆ. ಅಂತೆಯೇ ಮಹಿಳೆ, ಪುರುಷರಿಬ್ಬರಿಗೂ ಮತದಾನದ ಹಕ್ಕು ನೀಡಿದೆ. ಆದರೆ ನಮ್ಮನ್ನು ಆಳುತ್ತಿರುವ ವ್ಯವಸ್ಥೆಯನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಮಹಿಳೆಯರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಸಾಧ್ಯತೆ ಇದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದರೂ ನಿಜವಾಗಿ ಆಡಳಿತ ನಡೆಸುತ್ತಿರುವುದು ಆರ್‌ಎಸ್‌ಎಸ್‌ ಸಂಘಟನೆಯಾಗಿದೆ. ಬಿಜೆಪಿಯನ್ನು ಹಿಡಿತದಲ್ಲಿಟ್ಟುಕೊಂಡಿರುವ ಆರ್‌ಎಸ್‌ಎಸ್‌ ಸಂಘಟನೆಯಲ್ಲಿ ಮಹಿಳೆಯರನ್ನು ಕಾಣುವುದಿಲ್ಲ. ಹೀಗಾಗಿ ಭವಿಷ್ಯದಲ್ಲಿ ಇವರ ಕೈಗೆ ಆಡಳಿತ ದೊರೆತಲ್ಲಿ ಇದೀಗ ಮುಸ್ಲಿಮರಿಗೆ, ನಂತರದ ದಿನಗಳಲ್ಲಿ ಮಹಿಳೆಯರಿಗೆ ಮತದಾನದ ಅವಕಾಶ ದೊರೆಯುವುದಿಲ್ಲ ಎಂದು ಟೀಕಿಸಿದರು.

ದೇಶಾದ್ಯಂತ ಈಗಾಗಲೆ ನಾಲ್ಕೂವರೆ ಸಾವಿರ ಪ್ರಕರಣಗಳು ಇತ್ಯರ್ಥವಾಗದೇ ಉಳಿದಿವೆ. ಹೀಗಿರುವಾಗ ಈ ಕಾಯಿದೆಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಇತ್ಯರ್ಥಗೊಳಿಸುವುದು ಯಾವಾಗ, ಕಾನೂನು ರಕ್ಷಕನಾಗಬೇಕಿದ್ದ ನ್ಯಾಯಾಂಗ ಮೂಕ ಪ್ರೇಕ್ಷಕನಂತಾಗಿದ್ದು, ಯಾವುದೇ ಆದೇಶ ನೀಡುತ್ತಿಲ್ಲ ಎಂದು ವಿಷಾದಿಸಿದರು.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್‌ ವಿ.ಗೋಪಾಲಗೌಡ ಮಾತನಾಡಿ, ಜಾತಿ, ಮತ, ಧರ್ಮಗಳ ಆಧಾರದ ಮೇಲೆ ಶಾಸನಗಳನ್ನು ರಚಿಸಲು ಸಾಧ್ಯವಿಲ್ಲ. ಸಾರ್ವಭೌಮತ್ವ ಎಂದರೆ ಕೇವಲ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮಾತ್ರವಲ್ಲ. ಈ ದೇಶದ ಜನರೇ ಸಾರ್ವಭೌಮರಾಗಿ ದ್ದಾರೆ. ಇದನ್ನು ಅರ್ಥೈಸಿಕೊಳ್ಳದವರಿಗೆ ಶೀಘ್ರದಲ್ಲೇ ಅಂತಿಮ ದಿನ ಬರಲಿದೆ ಎಂದರು. ಪೌರತ್ವ ತಿದ್ದುಪಡಿ ಕಾಯಿದೆಯಲ್ಲಿ ಮುಸ್ಲಿಮರನ್ನು ಹೊರಗಿಟ್ಟಿದ್ದು ಸರಿಯಲ್ಲ. ಇದು ದೇಶದ ಜಾತ್ಯಾತೀತ ವ್ಯವಸ್ಥೆಗೆ ವಿರುದ್ಧವಾಗಿದೆ. ಪೌರತ್ವ ಕಾಯಿದೆ ಎಲ್ಲ ಧರ್ಮದ ವಲಸಿಗರಿಗೂ ಅನ್ವಯವಾಗುವಂತಿರಬೇಕು  ಎಂದು ತಿಳಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ  ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: