ಮೈಸೂರು

 ಜನಸಾಮಾನ್ಯರಿಗೆ ಮದುವೆ ಹೊರೆ ತಪ್ಪಿಸಲು ದೇವಾಲಯಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹ :ಯಶಸ್ಸಿಗೆ ಪ್ರತಿಯೊಬ್ಬರೂ ಕೈಜೋಡಿಸಿ : ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ

ಮೈಸೂರು,ಫೆ.3:-  ಜನಸಾಮಾನ್ಯರಿಗೆ ಮದುವೆ ಹೊರೆಯಾಗುತ್ತಿರುವುದನ್ನು ತಡೆಗಟ್ಟಲು ರಾಜ್ಯದ ಎ ಶ್ರೇಣಿಯ ದೇವಾಲಯಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿದ್ದು, ಅದರ ಯಶಸ್ಸಿಗೆ ಪ್ರತಿಯೊಬ್ಬರೂ ಕೈಜೋಡಿಸಿ ಆರ್ಥಿಕವಾಗಿ ಹಿಂದುಳಿದವರಿಗೆ ನೆರವಾಗಿ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು.

ಅವರು ನಿನ್ನೆ ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಾಲಯದ ದಾಸೋಹ ಭವನ ಸಭಾಂಗಣದಲ್ಲಿ  ಏರ್ಪಡಿಸಿದ್ದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮದುವೆಗಾಗಿ ಹಣಕಾಸು ಹೊಂದಿಸಲಾಗದೆ ಪರಿತಪಿಸುವ ಕಡು ಬಡವರ್ಗದ ಜನರಿಗೆ ಆಶ್ರಯವಾಗಲು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಎ ಶ್ರೇಣಿಯ 100 ದೇವಾಲಯಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ ಎಂದರು.

ಮದುವೆಗಾಗಿ ಸಾಲದ ಶೂಲಕ್ಕೆ ಸಿಲುಕಿ ಪರಿತಪಿಸುವ ಬಡ ಜನರಿಗೆ ಸಾಮೂಹಿಕ ವಿವಾಹ ಆಸರೆಯಾಗಬೇಕು, ಜನಸಾಮಾನ್ಯರ ಬದುಕು ಸುಸ್ಥಿರಗೊಳಿಸುವುದು ಈ ಯೋಜನೆ ಉದ್ದೇಶವಾಗಿದೆ. ಮೊದಲ ಪ್ರಯತ್ನವಾಗಿ ಏಪ್ರಿಲ್ 26 ಮತ್ತು ಮೇ 24ರಂದು ಎರಡು ಹಂತದಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ. ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಈ ಎರಡು ದಿನಗಳಲ್ಲಿ ಯಾವಾಗ ಎಂಬುದನ್ನು ಸ್ಪಲ್ಪ ದಿನಗಳಲ್ಲೇ ಅಂತಿಮಗೊಳಿಸಲಾಗುವುದು. ಪಟ್ಟಣ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಈ ಬಗ್ಗೆ ವ್ಯಾಪಕವಾಗಿ ಪ್ರಚಾರ ಮಾಡಲು ಕರಪತ್ರ ವಿತರಣೆ ಹಾಗೂ ಫ್ಲೆಕ್ಸ್ ಅಳವಡಿಸಿ ಜಾಗೃತಿ ಮೂಡಿಸಬೇಕು. ಜತೆಗೆ ಸಂಘ ಸಂಸ್ಥೆಗಳ ಸಹಕಾರವನ್ನು ಪಡೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಧುವಿಗೆ 10 ಸಾವಿರ ರೂ., ವರನಿಗೆ 5 ಸಾವಿರ ರೂ.ಆರ್ಥಿಕ ನೆರವು ನೀಡಲಾಗುವುದು. ವಧುವಿಗೆ 40 ಸಾವಿರ ರೂ.ಮೌಲ್ಯದ ಅಂದಾಜು 8 ಗ್ರಾಂ ಚಿನ್ನದ ಮಾಂಗಲ್ಯದ ಜತೆಗೆ ಅಗತ್ಯ ಬಟ್ಟೆ, ಧಿರಿಸು ಉಚಿತವಾಗಿ ನೀಡಲಾಗುವುದು. ಪ್ರತಿ ಜೋಡಿಗೆ ಕನಿಷ್ಠ 50 ಸಾವಿರ ರೂ.ವಿನಿಯೋಗ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಎದುರಾಗುವ ಸಾಧ್ಯತೆಯಿದ್ದು, ಚುನಾವಣಾ ನೀತಿ ಸಂಹಿತೆಯ ಬಿಸಿ ಇಂತಹ ಮಹತ್ವದ ಯೋಜನೆಗೆ ಅಡ್ಡಿಯಾಗದಂತೆ ನಿಗಾವಹಿಸಬೇಕು. ಸಾಮೂಹಿಕ ವಿವಾಹ ಯೋಜನೆ ಯಶಸ್ಸಿಗಾಗಿ ಜಿಲ್ಲಾ ಹಂತದ ನೋಡಲ್ ಅಧಿಕಾರಿಯೊಬ್ಬರನ್ನು ನಿಯೋಜಿಸಿ ಎಲ್ಲ ಇಲಾಖೆಗಳ ಅಧಿಕಾರಿಗಳ ಸಹಭಾಗಿತ್ವದಲ್ಲಿ ಮುನ್ನಡೆಯುವ ನಿಟ್ಟಿನಲ್ಲಿ ಕ್ರಮ ವಹಿಸಬೇಕೆಂದು ಸಲಹೆ ನೀಡಿದರು.

ಇದಕ್ಕೆ ಸಚಿವರು ಪ್ರತಿಕ್ರಿಯಿಸಿ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು. ಯೋಜನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಇರಬೇಕು ಎಂದರು.

ಸಭೆಯಲ್ಲಿ ತಹಶೀಲ್ದಾರ್ ಕೆ.ಎಂ.ಮಹೇಶ್‌ಕುಮಾರ್, ದೇವಾಲಯದ ಇಒ ಶಿವಕುಮಾರಯ್ಯ, ದೇಗುಲದ ಆಗಮಿಕ ಜೆ.ನಾಗಚಂದ್ರ ದೀಕ್ಷಿತ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎನ್.ಟಿ.ಗಿರೀಶ್, ಆರ್.ಇಂದನ್ ಬಾಬು, ಶ್ರೀಧರ್, ಪುಟ್ಟನಿಂಗಶೆಟ್ಟಿ, ಶಶಿರೇಖಾ, ಬಿಜೆಪಿ ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ, ಬಾಲಚಂದ್ರು, ನಗರಸಭೆ ಸದಸ್ಯರಾದ ಕಪಿಲೇಶ್, ಮಹದೇವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: