ಮೈಸೂರು

ವಿದೇಶಿ ಕಾನೂನಿನರಿವು ಅವಶ್ಯಕ: ಡಾ.ಸುನಿಲ್ ಪರಮೇಶ್ವರ

ಅವಕಾಶ ಸಿಕ್ಕಿದಾಗ ವಿದೇಶಿ ಭಾಷೆಗಳನ್ನು ಕಲಿಯಿರಿ. ಪ್ರಸ್ತುತ ಕಾಲಘಟ್ಟದಲ್ಲಿ ಕಂಪೆನಿಗಳು ದೇಶವಲ್ಲದೆ ವಿದೇಶದಲ್ಲೂ ಹಣ ಹೂಡಿಕೆ ಮಾಡುತ್ತಿವೆ. ಇಂತಹ ಸಂದರ್ಭಗಳಲ್ಲಿ ವಿದೇಶಿ ಕಾನೂನು ಮತ್ತು ನಿಯಮಗಳ ಬಗ್ಗೆ ಅರಿವಿರುವುದು ಅತೀ ಅವಶ್ಯಕ ಎಂದು ಬೆಂಗಳೂರಿನ ತರ್ಹೀಲ್ ಕನ್ಸಲ್ಟೆನ್ಸಿಯ ಸಿಇಒ ಡಾ.ಸುನಿಲ್ ಪರಮೇಶ್ವರ ಹೇಳಿದರು.

ಮೈರಾ ಸ್ಕೂಲ್ ಆಫ್ ಬ್ಯುಸಿನೆಸ್‍ನಲ್ಲಿ ‘ಉದ್ಯಮ ಕ್ಷೇತ್ರದಲ್ಲಿನ ನೂತನ ಆವಿಷ್ಕಾರಗಳು ಮತ್ತು ಬ್ಯುಸಿನೆಸ್ ವಿದ್ಯಾರ್ಥಿಗಳ ಮೇಲೆ ಇದರ ಪರಿಣಾಮ’ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಸಂಸ್ಥೆಗಳಿಗಿಂತಲೂ ವೇಗವಾಗಿ ವಿಶ್ವ ಬದಲಾಗುತ್ತಿದೆ. ಇದರಿಂದಾಗಿ ವ್ಯವಸ್ಥಾಪಕರು ಕಠಿಣ ಸವಾಲನ್ನು ಎದುರಿಸುತ್ತಿದ್ದಾರೆ. ಪ್ರತಿಯೊಂದು ಕಂಪೆನಿಗಳು ಬದಲಾವಣೆಯ ವೇಗದ ಗತಿಯನ್ನು ಅನುಸರಿಸಿ ಕಾರ್ಯ ನಿರ್ವಹಿಸಬೇಕಾಗಿರುತ್ತದೆ. ಅನಿಶ್ಚತೆಗಳು ಹೆಚ್ಚಾಗಿರುವ ಉದ್ಯಮ ಕ್ಷೇತ್ರದಲ್ಲಿ ಬದಲಾವಣೆ ಮಾತ್ರ ನಿಶ್ಚಿತವಾಗಿದೆ. ಎರಡು ವರ್ಷಗಳಲ್ಲಿ ಬದಲಾವಣೆಯ ಪ್ರಭಾವ ಹೆಚ್ಚಾಗಿ ಐಟಿ ಮತ್ತು ಹಣಕಾಸು ಉದ್ಯಮದ ಮೇಲಾಗಿದೆ. ನೂತನ ಪರಿಕರಗಳು, ನೂತನ ಆರ್ಥಿಕ ಉತ್ಪನ್ನಗಳು ಅಭಿವೃದ್ಧಿ ಹೊಂದಿವೆ. ಉದಾಹರಣೆಗೆ ಇನ್ಶೂರೆನ್ಸ್, ಬಂಡವಾಳ ಹೂಡಿಕೆ, ಸ್ಥಿರ ಆದಾಯ. ಪ್ರಸ್ತುತ ಉದ್ಯಮ ಕ್ಷೇತ್ರದಲ್ಲಿ ದೂರಗಾಮಿ ಯೋಜನೆಗಳು ಅರ್ಥ ಕಳೆದುಕೊಂಡಿವೆ. ಈಗ ಏನಿದ್ದರೂ ಪ್ರತಿದಿನದ ಮಾರುಕಟ್ಟೆ ಆಧರಿಸಿ ಕೌಶಲ, ಯೋಜನೆ ರೂಪಿಸಬೇಕು ಎಂದು ಡಾ. ಸುನಿಲ್ ಪರಮೇಶ್ವರ ಹೇಳಿದರು.

ವಿಶ್ವ ಮಟ್ಟದಲ್ಲಿ ಉದ್ಯಮದಲ್ಲಿ ಯಶಸ್ಸು ಗಳಿಸಲು ಉದ್ಯಮದ ವ್ಯವಹಾರ ಕಲ್ಪನೆಗಳು ಮತ್ತು ವಿಶ್ಲೇಷಣಾ ಕೌಶಲಗಳನ್ನು ಅಳವಡಿಸಿಕೊಳ್ಳುವುದು ಅತಿ ಅವಶ್ಯಕ ಎಂದರು.

Leave a Reply

comments

Tags

Related Articles

error: