ಮೈಸೂರು

ಸೌರಶಕ್ತಿಯನ್ನು ಬಳಸುವತ್ತ ಜನತೆ ಮುಂದಾಗಬೇಕು : ಜೆ.ಜಗದೀಶ್ ಸಲಹೆ

ವಿದ್ಯುತ್ ಗೆ ಬದಲಾಗಿ ನೈಸರ್ಗಿಕವಾಗಿ ದೊರೆಯುವ ಸೌರಶಕ್ತಿಯನ್ನು ಬಳಸಲು ಸೋಲಾರ್ ಹೀಟರ್ ಹಾಗೂ ಸೌರಶಕ್ತಿ ದೀಪಗಳನ್ನು ಬಳಸುವತ್ತ ಜನತೆ ಮುಂದಾಗಬೇಕು ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ  ಜೆ.ಜಗದೀಶ್ ಸಲಹೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಹಾಗೂ ಜಿಲ್ಲಾ ಪತ್ರಕರ್ತರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪತ್ರಕರ್ತರಿಗೆ ನವೀಕರಿಸಬಹುದಾದ ಇಂಧನ ಮತ್ತು ಇಂಧನ ಸಂರಕ್ಷಣೆ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಗಾರವನ್ನು ಸೋಲಾರ್ ಲೈಟ್ ಬೆಳಗುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿಶ್ವದಾದ್ಯಂತ ಲಭ್ಯವಿರುವ ಇಂಧನ ತೈಲಗಳನ್ನು ಬಳಸುವುದರ ಬದಲು ನೈಸರ್ಗಿಕವಾಗಿ ದೊರೆಯುವ ಸೌರಶಕ್ತಿಯನ್ನು ದಿನನಿತ್ಯ ಬಳಸುವುದು ಹೆಚ್ಚು ಸೂಕ್ತ ಎಂದರು. ಸೋಲಾರ್ ನ್ನು ಬಳಸುವುದರಿಂದ ಅಪಾರ ಪ್ರಮಾಣದ ವಿದ್ಯುತ್ ಉಳಿತಾಯವಾಗಲಿದೆ. ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಇಂಧನಗಳ ಕೊರತೆ ಕಾಡಲಿದೆ. ಅದರಿಂದ ಎಲ್ಲ ಅಗತ್ಯತೆಗಳಿಗೂ ಸೌರಶಕ್ತಿಯನ್ನು ಬಳಸುವ ದಿನದೂರವಿಲ್ಲ ಎಂದು ತಿಳಿಸಿದರು.

ಮೈಸೂರು ಹಾಗೂ ಹುಬ್ಬಳ್ಳಿಯನ್ನ ಮಾಡೆಲ್‌ ಸಿಟಿ ಎಂದು ಕರೆಯುತ್ತಾರೆ. ಈ ಸಿಟಿಯಲ್ಲಿ ಸೋಲಾರ್ ಅನುಷ್ಠಾನ ಮಿತ್ರಾ ಕೂಡ ಬರುತ್ತಿದೆ. ಇದೇ ಯೋಜನೆಯಲ್ಲಿ ಅನೇಕ ಯೋಜನೆಗಳನ್ನು ಸಿದ್ಧಗೊಳಿಸಲಾಗುತ್ತಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅದನ್ನು ಸಲ್ಲಿಸುತ್ತೇವೆ. ವಿಮಾನ ಕೂಡ ಸೋಲಾರ್ ಶಕ್ತಿಯಿಂದಲೇ ಆರಂಭಗೊಳ್ಳುತ್ತಿದೆ. ರೈತರು ಸೋಲಾರ್ ನಿಂದಲೇ ಬೆಳೆ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆಯ ಮತ್ತಷ್ಟು ಅಭಿವೃದ್ಧಿಗೆ ಶ್ರಮಿಸಲಿದ್ದೇವೆ ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿ, ಸೋಲಾರ್ ಬಳಸಲು ಜನರು ಮುಂದೆ ಬಂದಲ್ಲಿ ಮಾತ್ರ ಮೈಸೂರು ಸೋಲಾರ್ ಸಿಟಿ ಯಾಗಲು ಸಾಧ್ಯ ಎಂದರು.

ಕೆ.ಆರ್.ಇ.ಡಿ.ಎಲ್ ನ ಯೋಜನಾ ಅಭಿಯಂತರ ಡಿ.ಕೆ.ದಿನೇಶ್ ಕುಮಾರ್ ಎಲ್.ಪಿ.ಜಿ ಹಾಗೂ ವಿದ್ಯುತ್ ಅನ್ನು ಉಳಿಸುವ ಸಲುವಾಗಿ ನಿಗಮದ ವತಿಯಿಂದ ಸಿದ್ಧಪಡಿಸಿದ ಪರಿಕರಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.
ಯೋಜನಾ ಅಭಿಯಂತರರಾದ ಡಿ.ಕೆ.ದಿನೇಶ್ ಕುಮಾರ್, ಪತ್ರಕರ್ತರ ಸಂಘದ  ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು ಉಪಸ್ಥಿತರಿದ್ದರು.

ಪತ್ರಕರ್ತರಿಗಾಗಿ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೆಚ್ಚಿನ ಅಂಕಪಡೆದ ಸಿಟಿಟುಡೆ ಪತ್ರಕರ್ತ ಸುರೇಶ್ ಸೇರಿದಂತೆ ಎಂಟು ಮಂದಿ ಪತ್ರಕರ್ತರಿಗೆ ಪ್ರಶಸ್ತಿ ವಿತರಿಸಲಾಯಿತು. (ಎಸ್.ಎನ್-ಎಸ್.ಎಚ್)

 

Leave a Reply

comments

Related Articles

error: