ಮೈಸೂರು

ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ವತಿಯಿಂದ ಮಧ್ವನವಮಿಯ ಅಂಗವಾಗಿ ಮಧ್ವನಮನ ಕಾರ್ಯಕ್ರಮ ಆಯೋಜನೆ

ಮೈಸೂರು,ಫೆ.4:- ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ವತಿಯಿಂದ ಮಧ್ವನವಮಿಯ ಅಂಗವಾಗಿ ಅಗ್ರಹಾರದ ಮಧ್ವಾಚಾರ್ಯರ ರಸ್ತೆಯಲ್ಲಿ ಮಧ್ವನಮನ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು.

ಮಧ್ವಾಚಾರ್ಯರ ಭಾವಚಿತ್ರಕ್ಕೆ  ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ.ಪ್ರಕಾಶ್  ಅವರು ಪುಷ್ಪನಮನ ಸಲ್ಲಿಸಿ ಮಧ್ವನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಉಡುಪಿ ಜಿಲ್ಲೆಯ ಪಾಜಕ ಗ್ರಾಮದ ಮಧ್ಯಗೇಹ ಭಟ್ಟ ಮತ್ತು ವೇದವತಿ ದಂಪತಿಗಳಿಗೆ ಜನಿಸಿದ ಆನಂದತೀರ್ಥರು ಪೂರ್ವಾಶ್ರಮದ ಬಳಿಕ ವಾಸುದೇವ ಮಧ್ವಾಚಾರ್ಯರಾಗಿ  13ನೇ ಶತಮಾನದಲ್ಲಿ ದ್ವೈತ ಮತದ ಸ್ಥಾಪಕರಾಗಿ ತತ್ವಜ್ಞಾನಿಗಳಾದರು. ಪುರಾಣದಲ್ಲಿ ಬರುವ ಹನುಮ ಮತ್ತು  ಅವತಾರವೇ ಮಧ್ವಾಚಾರ್ಯರು.  74ನೇ ವಯಸ್ಸಿನಲ್ಲಿ ಬದರಿಕಾಶ್ರಮಕ್ಕೆ ಒಬ್ಬರೇ ಕಾಲ್ನಡಿಗೆಯಲ್ಲಿ ಪ್ರಯಾಣ ಹೋದ ದಿನವೇ ಮಧ್ವನವಮಿ ಎಂದು ಆಚರಿಸಲಾಗುತ್ತದೆ.  ಭಕ್ತಿಮಾರ್ಗದ ಪ್ರವರ್ತಕರಾದ ಮಧ್ವಾಚಾರ್ಯರು ಕನ್ನಡಲ್ಲಿ ದಾಸಪಂಥದ ಮಾರ್ಗ ಸಂಗೀತ ಕಲಾ ಪ್ರಕಾರದೊಡನೆ ಬೆಳೆಯಲು ಸ್ಫೂರ್ತಿಯಾದರು ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ಡಾ. ಕೆ.ರಘುರಾಂ ವಾಜಪೇಯಿ   ಮಾತನಾಡಿ ಮಧ್ವಾಚಾರ್ಯರ ದ್ವೈತ ಸಿದ್ದಾಂತ ತತ್ವ ಸಂದೇಶ ಪಾಲಿಸಿದ  ರಾಘವೇಂದ್ರ ಸ್ವಾಮಿಗಳು 16ನೇ ಶತಮಾನದಲ್ಲಿ ಪವಾಡ ಪುರುಷರಾಗಿ ಜನರ ಕಷ್ಟಗಳನ್ನು ನಿವಾರಿಸುವ ಭಕ್ತಿಯ ಮೋಕ್ಷ ಮಾರ್ಗದ ಮೂಲಕ ದೇಶದ ಅನೇಕ ಕಡೆ ಇಂದು ರಾಘವೇಂದ್ರ ಸ್ವಾಮಿಯ ಮಠಗಳು ಸ್ಥಾಪನೆಯಾಗಿದೆ ಎಂದರೆ ಮಧ್ವಾಚಾರ್ಯರ ಆಧ್ಯಾತ್ಮಿಕ ಶಕ್ತಿಯಾಗಿದೆ. ಉಡುಪಿಯ ಅಷ್ಟಮಠಗಳು ವ್ಯಾಸರಾಜ ಮಠ, ಉತ್ತರಾಧಿಮಠಗಳು ಸೇರಿದಂತೆ ಮಧ್ವಾಚಾರ್ಯರ ಜೀವನ ಸಂದೇಶದೊಂದಿಗೆ ಇಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು, ದಾಸೋಹ ಭವನಗಳು ಸ್ಥಾಪಿಸಿ ಸಮಾಜವನ್ನು ಕಾಪಾಡುತ್ತಿದೆ, ರಾಜ್ಯ ಸರ್ಕಾರದ ವತಿಯಿಂದ ಶಂಕರ ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯ. ಅದರೊಂದಿಗೆ ಶಂಕರ,ಮಧ್ವ, ರಾಮಾನುಜ ಜಯಂತಿಯನ್ನು ಆಚಾರ್ಯತ್ರಯರ ಜಯಂತಿಯೆಂದು ಜಾರಿಗೆ ತಂದರೆ ನಮ್ಮ ವಿಪ್ರ ಸಮುದಾಯ ಒಗ್ಗಟ್ಟಿನೊಂದಿಗೆ ಸಂಘಟಿತರಾಗಿ ಮುಖ್ಯವಾಹಿನಿಗೆ ಬರಬಹುದು ಎಂದರು.

ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ   ಮಾತನಾಡಿ ಮಧ್ವಾಚಾರ್ಯರು ಮೂಲತಃ ಕನ್ನಡಿಗರು ಎನ್ನುವುದು ಸಂತೋಷದ ವಿಚಾರ.  800ವರ್ಷಗಳ ಹಿಂದೆಯೇ ಸ್ಥಾಪಿತವಾದ ಮಧ್ವರ ಸಂಪ್ರದಾಯ ಇಂದು ವಿಶ್ವದೆಲ್ಲಡೆ ಬೆಳೆದುಕೊಂಡು ಬಂದಿದೆ. ಇದನ್ನು ಸ್ಥಾಪಿಸಿದ ಗುರುಗಳಾದ ಮಧ್ವಾಚಾರ್ಯರನ್ನು ನಾವು ಮರೆಯುತ್ತಿರುವುದು ಬೇಸರದ ಸಂಗತಿ, ಮಾಧವಾಚಾರ್ ರಸ್ತೆಯೆಂದು ತಪ್ಪಾಗಿ ರಸ್ತೆ ಮತ್ತು ವೃತ್ತಕ್ಕೆ ನಾಮಕರಿಸಲಾಗಿದೆ. ಅಗ್ರಹಾರದಿಂದ ಪ್ರಾರಂಭವಾಗುವ ಮಧ್ವಾಚಾರ್ಯರ ರಸ್ತೆ ಮಧ್ವಾಚಾರ್ಯ ವೃತ್ತದ ಮಾರ್ಗವಾಗಿ ಮಾಧ್ವ ಹಾಸ್ಟೆಲ್ ಸಿಲ್ಕ್ ಫ್ಯಾಕ್ಟರಿ ವೃತ್ತದವರೆಗೂ ನೂರಾರು ವರ್ಷದಿಂದ ಕರೆಯಲ್ಪಡುತ್ತಿತ್ತು. ಅಂತೆಯೇ ನಗರಪಾಲಿಕೆಯಲ್ಲೂ ನಾಮಕರಿಸಲಾಗಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಮಾಧವಾಚಾರ್ ರಸ್ತೆ ಎಂದು ತಪ್ಪಾಗಿ ರಸ್ತೆ ಇಕ್ಕಲಗಳಲ್ಲಿ ಹಾಕಿದ್ದು ಇದನ್ನು ನಗರಪಾಲಿಕೆ ನಾಮಕರಣ ಸಮಿತಿ ಸರಿಪಡಿಸಲು ಮುಂದಾಗಬೇಕು ಎಂದರು.

ನಗರಪಾಲಿಕೆ ಸದಸ್ಯೆ ಸೌಮ್ಯ ಉಮೇಶ್   ಮಾತನಾಡಿ ಮಧ್ವಾಚಾರ್ಯರ ವೃತ್ತವನ್ನು ಮತ್ತು ಮುಖ್ಯರಸ್ತೆಯನ್ನು ಅಭಿವೃದ್ದಿ ಪಡಿಸಲು ಯೋಜನೆ ರೂಪಿಸಲಾಗುವುದು ಮತ್ತು ಮುಂದಿನ ವರ್ಷದಿಂದ ಮಧ್ವನಮನ ಆಚರಣೆಯನ್ನು ಆಚರಿಸಲು ಸಮಿತಿ ರಚಿಸಲಾಗುವುದು ಎಂದರು.

ಬ್ರಾಹ್ಮಣ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಸುದರ್ಶನ್ ಮಾತನಾಡಿ ಇಂದಿನ ತಾಂತ್ರಿಕ ಯುಗದಲ್ಲಿ ಮಧ್ವಾಚಾರ್ಯರ ಬಗ್ಗೆ ಹೆಚ್ಚಾಗಿ ಬರೆದಿರುವ ಪುಸ್ತಕಗಳನ್ನು ಸಾಮಾಜಿಕ ಜಾಲಾತಾಣದಲ್ಲಿ ಪಡೆಯಲು ಡಿಜಿಟಲ್ ಮಾಹಿತಿಯ ಅವಶ್ಯಕತೆಯಿದೆ. ಕನ್ನಡ ಸಂಸ್ಕೃತಿ ಇಲಾಖೆ ದಾಸರ ಪದಗಳು ಸಂಗೀತ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಿ ಮಧ್ವಾಚಾರ್ಯರ ಬದುಕಿನ ದಿನಗಳನ್ನು ಸ್ಮರಿಸುವಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿ ಎಂ.ಆರ್ ಬಾಲಕೃಷ್ಣ ಅಗಸ್ತ್ಯ ಕೋಪರೇಟಿವ್ ಸೊಸೈಟಿ  ಅಧ್ಯಕ್ಷರಾದ ಸಿವಿ. ಪಾರ್ಥಸಾರಥಿ, ಎಂ.ಡಿ ಪಾರ್ಥಸಾರಥಿ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್ ಸತ್ಯನಾರಾಯಣ್, ಬ್ರಾಹ್ಮಣ ಯುವ ವೇದಿಕೆಯ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ,ಸುದರ್ಶನ್, ಲೋಕೇಶ್, ಜಯಸಿಂಹ,  ವಿನಯ್ ಕಣಗಾಲ್, ಹೆಚ್.ವಿ ಭಾಸ್ಕರ್, ಕಡಕೊಳ ಜಗದೀಶ್,  ನಿಶಾಂತ್, ಪ್ರಶಾಂತ್, ಕೃಷ್ಣರಾಜೇಂದ್ರ ಬ್ಯಾಂಕಿನ ಉಪಾಧ್ಯಕ್ಷರಾದ ಬಸವರಾಜು ಬಸಪ್ಪ, ಮುಳ್ಳೂರು ಸುರೇಶ್, ಗಣೇಶ್ ಪ್ರಸಾದ್, ಚಕ್ರಪಾಣಿ, ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: