ಮೈಸೂರು

ಕ್ಷುಲ್ಲಕ ಕಾರಣಕ್ಕೆ ಬಹಿಷ್ಕಾರಕ್ಕೊಳಗಾದ ಕುಟುಂಬ ; ಮೈಸೂರು ಜಿಲ್ಲೆಯಲ್ಲಿ ಸಾಮಾಜಿಕ ಬಹಿಷ್ಕಾರದ ಪಿಡುಗು ಇನ್ನೂ ಜೀವಂತ

ಮೈಸೂರು,ಫೆ.5:- 21 ನೇ ಶತಮಾನದಲ್ಲೂ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಇನ್ನೂ ಸಾಮಾಜಿಕ ಬಹಿಷ್ಕಾರದ ಪಿಡುಗು  ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬೆಳಲೆ ಗ್ರಾಮದಲ್ಲಿ ಜೀವಂತವಾಗಿದೆ.

ಕ್ಷುಲ್ಲಕ ಕಾರಣಕ್ಕೆ ವೃದ್ಧ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದ್ದು, ವ್ಯಕ್ತಿಯೋರ್ವ ಚಪ್ಪಲಿ ಎಸೆದ ಕಾರಣಕ್ಕೆ ಬಹಿಷ್ಕಾರಕ್ಕೆ ಒಳಗಾದವರಾಗಿದ್ದಾರೆ. ಕುಟುಂಬ ಶಾಸಕ ಹರ್ಷವರ್ಧನ್ ಮುಂದೆ ಕಣ್ಣೀರಿಟ್ಟು ಅಳಲು ತೋಡಿಕೊಂಡಿದ್ದು, ಗ್ರಾಮದಲ್ಲಿ ಯಾರೂ ಮಾತನಾಡುವಂತಿಲ್ಲ. ಯಾವುದೇ ಕೆಲಸಕಾರ್ಯಗಳಿಗೆ ಕರೆಯುವಂತಿಲ್ಲ ಎಂದು ಅಳಲು ತೋಡಿಕೊಂಡರು.  ನಂಜನಗೂಡು ತಾಲೂಕಿನ ಬೆಳಲೆ ಗ್ರಾಮದಲ್ಲಿ ಜೀವಂತವಾಗಿರುವ ಸಾಮಾಜಿಕ ಬಹಿಷ್ಕಾರದ ಪಿಡುಗಿಗೆ ಬೆಳಲೆ ಗ್ರಾಮದ ಈರನಾಯಕ ಎಂಬವರ ಪುತ್ರಿ ಭಾಗ್ಯಮ್ಮ ಎಂಬ ಅವಿವಾಹಿತ ಮಹಿಳೆ  ಮಾನಸಿಕ ಕಿರುಕುಳಕ್ಕೊಳಗಾಗಿದ್ದಾರೆ. ದಿನನಿತ್ಯ ಹೂವು ಮಾರಿ ಜೀವನ ಸಾಗಿಸುತ್ತಿರುವ  ಕುಟುಂಬದ ಭಾಗ್ಯಮ್ಮ ಎಂಬವರ ಮೇಲೆ ಗ್ರಾಮದ ವ್ಯಕ್ತಿಯೋರ್ವ ಚಪ್ಪಲಿ ಎಸೆದಿದ್ದು, ಈ ಬಗ್ಗೆ ಈರನಾಯಕನ‌ ಮತ್ತೋರ್ವ ಮಗಳು ದೂರು ಕೊಟ್ಟಿದ್ದಾರೆ. ಇದನ್ನು ಅಸ್ತ್ರವನ್ನಾಗಿ ಮಾಡಿಕೊಂಡ ಬೆಳಲೆ ಗ್ರಾಮದ ಯಜಮಾನರುಗಳು ಈರನಾಯಕ ಕುಟುಂಬಕ್ಕೆ ಹತ್ತು ದಿನಗಳಿಂದ ಸಾಮಾಜಿಕ ಬಹಿಷ್ಕಾರ ಹೇರಿದ್ದಾರೆ. ಶಾಸಕ ಹರ್ಷ ವರ್ಧನ್ ಅವರು ಗ್ರಾಮದ ಗುದ್ದಲಿ ಪೂಜೆಗೆ ತೆರಳಿದ ಸಂದರ್ಭದಲ್ಲಿ ನೋವು ತೋಡಿಕೊಂಡು ನ್ಯಾಯಕ್ಕಾಗಿ ಕುಟುಂಬ ಅಂಗಲಾಚಿದೆ. ನ್ಯಾಯ ಕೊಡಿಸುವ ಭರವಸೆ ಕೊಟ್ಟು ಶಾಸಕ ಹರ್ಷವರ್ಧನ್ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಹಿಂದುಳಿದ ಹಾಗೂ ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಇಂತಹ ಸಾಮಾಜಿಕ ಬಹಿಷ್ಕಾರದ ಪಿಡುಗುಗಳು ಇನ್ನೂ ಜೀವಂತವಾಗಿದೆ ಎಂದರೆ ಸಮಾಜವೇ ತಲೆತಗ್ಗಿಸಬೇಕಾಗಿದೆ. ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿರುವ ನೊಂದ ಕುಟುಂಬಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನ್ಯಾಯ ಕಲ್ಪಿಸಿಕೊಡುವರೇ ಎಂಬುದು ಇದೀಗ ಯಕ್ಷ ಪ್ರಶ್ನೆಯಾಗಿ ಉಳಿದಿದೆ.   (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: