ಮೈಸೂರು

ಶಾಸಕ ಎಸ್.ಎ.ರಾಮದಾಸ್ ಬಡವರ ಮೇಲೆ ಗದಾ ಪ್ರಹಾರ ಮಾಡುತ್ತಿದ್ದಾರೆ : ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆರೋಪ

ಮೈಸೂರು,ಫೆ.6:-  ನಾನು ಶಾಸಕನಾಗಿದ್ದ ನಾಲ್ಕುವರ್ಷಗಳ ಅವಧಿಯಲ್ಲಿ ಶ್ರಮಿಸಿ, ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರ ಮೇಲೆ ಹಾಗೂ ವಸತಿ ಸಚಿವರಾಗಿದ್ದ ಅಂಬರೀಷ್, ಕೃಷ್ಣಪ್ಪ ಇವರುಗಳಿಗೆ ಒತ್ತಡ ಹಾಕಿ ತಂದ ಮನೆಗಳನ್ನು ಕಟ್ಟಿಸಲು ಬೇಕಾದ ಜಮೀನುಗಳನ್ನು, ಮೂಡಾದಿಂದ ಸತತ ಹೋರಾಟ ಮಾಡಿ ತಂದ ಆಶ್ರಯ ಮನೆ ಯೋಜನೆ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿಯ ಯೋಜನೆಗಳಿಗೆ ತಡೆಯೊಡ್ಡಿರುವ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಬಡವರ ಮೇಲೆ ಗದಾ ಪ್ರಹಾರ ಮಾಡುತ್ತಿದ್ದಾರೆಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆರೋಪಿಸಿದರು.

ಅವರಿಂದು ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಓರ್ವ ಶಾಸಕನಾಗಿ ಅನಾಗರೀಕರಾಗಿ ವರ್ತಿಸಿ, ಸ್ವಲ್ಪವೂ ಮಾನವೀಯತೆ ಇಲ್ಲದೆ ಬದುಕಿಗಾಗಿ ಕಷ್ಟಪಡುತ್ತಿರುವ ಬಡವರ ತಲೆ ಮೇಲೆ ಚಪ್ಪಡಿ ಎಳೆಯುವ ಕೆಲಸ ಮಾಡಬಾರದು. ನಾನು ಶ್ರಮವಹಿಸಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಈ ಮನೆಗಳಿಗೆ ಬೇಕಾದ ಜಮೀನನನ್ನು ಮೂಡಾ ಪ್ರಾಧಿಕಾರದಿಂದ ಎಲ್ಲ ಸದಸ್ಯರ ಮನವೊಲಿಸಿ ಮಳಲವಾಡಿ 3.5ಎಕ್ರೆ ಜಮೀನು, ವಿಶ್ವೇಶ್ವರ ನಗರ 1.5ಎಕ್ರೆ ಜಮೀನು ಪಡೆದು ಮಳಲವಾಡಿಯಲ್ಲಿ 1344, ವಿಶ್ವೇಶ್ವರ ನಗರದಲ್ಲಿ 868, ಒಟ್ಟು 2212ಮನೆಗಳು, ಕೊಳಚೆ ನಿರ್ಮೂಲನಾ ಮಂಡಳಿಯಿಂದ ಈ ಎರಡು ಯೋಜನೆಗಳಿಗೆ ಹಣ ಬಿಡುಗಡೆಯಾಗಿ ಕೆಲಸದ ಟೆಂಡರ್ ಮುಗಿದು, ಗುತ್ತಿಗೆದಾರರು ಮನೆ ಕಟ್ಟಲು ಬಂದಿರುವಾಗ ಅವರಿಗೆ ಬೆದರಿಕೆ ಹಾಕಿ ಕೆಲಸ ಪ್ರಾರಂಭವಾಗದಂತೆ ಶಾಸಕ ರಾಮದಾಸ್ ತಡೆದಿದ್ದಾರೆಂದು ಆರೋಪಿಸಿದರು.

ನಾನು ಮೂರು ವರ್ಷಗಳ ಕಾಲ ಸತತ ಹೋರಾಟ ನಡೆಸಿ 13.8ಎಕ್ರೆ ಜಮೀನಿಗೆ ಮೂಡಾ ಪ್ರಾಧಿಕಾರಕ್ಕೆ 7ಕೋಟಿ ಹಣವನ್ನು ಸರ್ಕಾರದಿಂದ ಕಟ್ಟಿಸಿ ಲಲಿತಾದ್ರಿಪುರದ ಜಮೀನನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿ ಆಗಿದೆ. ರಾಜೀವ್ ಗಾಂಧಿ ವಸತಿ ಯೋಜನೆಯಿಂದ ಅನುಮತಿಯಾಗಿರುವ 3084ಮನೆಗಳಲ್ಲಿ ಲಲಿತಾದ್ರಿಪುರದಲ್ಲಿ 1440 ಮನೆಗಳು, ಗೊರೂರಿನಲ್ಲಿ 1644ಮನೆಗಳು, ಒಟ್ಟು 3084ಆಶ್ರಯ ಮನೆಗಳಿವೆ. ಇದಕ್ಕೆ ರಾಜೀವ್ ಗಾಂಧಿ ಹೌಸಿಂಗ್ ಸ್ಕೀಮ್ ನಿಂದ 18ಕೋಟಿ ಒಂದೂವರೆ ವರ್ಷದ ಹಿಂದೆಯೇ ಮಂಜೂರಾಗಿದ್ದು ಇದು ಅನ್ಯಾಯವಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ  ಹಾಗೆಯೇ ಬಿದ್ದಿದೆ. ಇದಕ್ಕೆ ಟೆಂಡರ್ ಕರೆಯಲು ತಡೆ ಹಾಕಿ ನಿಲ್ಲಿಸಲಾಗಿದೆ. ಇವರು ತಡೆ ಹಾಕಲು ಕೊಡುವ ಕಾರಣ ಈಗ ಅನುಮತಿಯಾಗಿರುವ ಜಿ+2ಮಾದರಿಯನ್ನು ನಿಲ್ಲಿಸಿ ಹೊಸ ಯೋಜನೆ ಮಾಡಿ ಜಿ+14ಮನೆಯನ್ನು ಕಟ್ಟಿ ಎನ್ನುತ್ತಿದ್ದಾರೆ. ಬಡವರು ಎರಡು ಮಹಡಿ ಏರುವುದೇ ಕಷ್ಟ. ಇನ್ನು 14 ಮಹಡಿ ಏರಲು ಸಾಧ್ಯವೇ? ಇದಕ್ಕೆ ಲಿಫ್ಟ್ ಗಳಿಗೆ ಅವಕಾಶವಿಲ್ಲ. ಮನೆಗೆ ಕೇಂದ್ರ ಸರ್ಕಾರ ಕೊಡುವುದು 1.50ಲಕ್ಷ, ರಾಜ್ಯ ಸರ್ಕಾರ 1.20ಲಕ್ಷ, ಫಲಾನುಭವಿಗಳ ವಂತಿಕೆ 73500ಬ್ಯಾಂಕ್ ಸಾಲ 1.46ಲಕ್ಷ, ಮನೆಯ ಒಟ್ಟು ವೆಚ್ಚ 4.80ಲಕ್ಷ. ಒಂದು ಬಾರಿ ಅನುಮತಿಯಾಗಿ ಇದನ್ನು ರದ್ದು ಮಾಡಿದರೆ ಈ ಯೋಜನೆ ಹಾಳುಗಡವಿದ ಹಾಗೆ. ಮತ್ತೆ ಹೊಸ ಯೋಜನೆಗೆ ಸರ್ಕಾರ ಒಪ್ಪಲ್ಲ. ಹಿಂದೆ ಈ ಯೋಜನೆಗಳೆಲ್ಲಾ ಕೇಂದ್ರ ಸರ್ಕಾರಕ್ಕೆ ಹೋಗಿ ಅಲ್ಲಿ ಅನುಮತಿಯಾಗಿ ಅದರ ಹಣ ಬಿಡುಗಡೆಯಾಗಿ ರಾಜ್ಯ ಸರ್ಕಾರದ ಹಣ ಬಿಡುಗಡೆಯಾಗಲು ಮೂರು ವರ್ಷ ಹಿಡಿದಿದೆ. ಮತ್ತೆ ಹಾಳು ಗೆಡವಿದರೆ ಈ ಯೋಜನೆಯೂ ಸಮಾಪ್ತಿಯಾದ ಹಾಗೆ ಎಂದು ಬೇಸರ ವ್ಯಕ್ತಪಡಿಸಿದರು.

ಈಗ ಇವರ 14ಅಂತಸ್ತು ಯೋಜನೆಯನ್ನು ಸರ್ಕಾರ ಒಪ್ಪಿರುವುದಿಲ್ಲ. ಶಾಸಕ ರಾಮ್ ದಾಸ್ ಅವರಿಗೆ ಜಿಲ್ಲಾಧಿಕಾರಿಗಳು ಹೊಸ ಯೋಜನೆಯನ್ನು ಮಾಡಿ ಜಮೀನು ಕೊಡುತ್ತೇವೆ ಎಂದಿದ್ದಾರೆ. ಹಾಗೆಯೇ ರಾಜೀವ್ ಗಾಂಧಿ ಹೌಸಿಂಗ್ ಸ್ಕೀಮ್ ನಲ್ಲಿ ಹೊಸ ಮನೆಗಳನ್ನು ಎಷ್ಟು ಬೇಕಾದರೂ ಕೊಡುತ್ತೇವೆ ಎಂದಿದ್ದಾರೆ. ಬಡವರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಹೊಸ ಮನೆಗಳನ್ನು ಕಟ್ಟಲಿ. ಈ ಯೋಜನೆಯನ್ನು ಹಾಗೆಯೇ ಬಿಡಲಿ. ಇವರಿಗೆ ಯಾಕೆ ಮನೆಯ ಫಲಾನುಭವಿಗಳಾದ ಬಡವರಿಗೆ ಈಗ ಕಟ್ಟಲು ಸಿದ್ಧವಾಗಿರುವ ಕೊಳಚೆ ನಿರ್ಮೂಲನಾ ಮಂಡಳಿಯ 2212ಮನೆಗಳು, ರಾಜೀವ್ ಗಾಂಧಿ ಹೌಸಿಂಗ್ ಸ್ಕೀಮ್ ನ 3084ಮನೆಗಳು, ಒಟ್ಟು 5296ಮನೆಗಳನ್ನು ಇವರು ಹಾಳುಗೆಡವಲು ಹೊರಟಿರುವುದು ಯಾವ ಸಂಸ್ಕೃತಿ ಎಂದು ಪ್ರಶ್ನಿಸಿದರು.

ನಾನು ಮಾಡಿದ ಹಲವಾರು ಯೋಜನೆಯ ಎಲ್ಲಾ ಕೆಲಸಗಳು ಇಂದಿಗೂ ಮುಂದುವರಿಯುತ್ತಿದೆ. ಉದಾಹರಣೆಗೆ ವಿದ್ಯಾರಣ್ಯರಂ 16ನೇ ಮುಖ್ಯ ರಸ್ತೆ ಮತ್ತು ಎಲ್ಲಾ ರಸ್ತೆಯ ಮರು ನವೀಕರಣದ ಕೆಲಸ ಹಾಗೂ 4.5ಕೋಟಿ ವೆಚ್ಚದಲ್ಲಿ ದೊಡ್ಡ ಮೋರಿಯಲ್ಲಿ ಹರಿಯುತ್ತಿದ್ದ ಒಳಚರಂಡಿ ನೀರನ್ನು ತಪ್ಪಿಸಿಹೊಸ ದೊಡ್ಡ ಪೈಪ್ ಅಳವಡಿಸಿ ಮಾಡುತ್ತಿರುವ ಕೆಲಸ, ಇನ್ನೂ ಹಲವಾರು ನಾನು ಮಾಡಿದ ಕೆಲಸವನ್ನೇ ಇವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಈ ಬಡವರ ಒಂದು ಸೂರು ಕಟ್ಟಿಕೊಳ್ಳುವ ವಿಚಾರದಲ್ಲಿ ರಾಜಕೀಯ ಮಾಡಿ ಅವರನ್ನು ಬೀದಿಗೆ ಬೀಳುವಂತೆ ಮಾಡುವ ಈ ಕ್ರೀರತ್ವ ಏಕೆ? ಇನ್ನು ಹದಿನೈದು ದಿನಗಳಲ್ಲಿ ಕೆಲಸ ಪ್ರಾರಂಭವಾಗಲಿಲ್ಲವೆಂದರೆ ಮುಂದಿನ ಹೋರಾಟ ಉಗ್ರರೂಪ ತಾಳುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ   ವಿ ಲೋಕೇಶ್ ಪಿಯಾ,ಮಾಜಿ ಸದಸ್ಯರೂ,ವಕೀಲರೂ ಆದ  ಎಂ ಸುನೀಲ್,ಕಾಂಗ್ರೆಸ್ ಮುಖಂಡರುಗಳಾದ   ಗುಣಶೇಖರ್,ವಿಶ್ವನಾಥ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: