ಕ್ರೀಡೆ

`ಜಂಬೋ’ ಖ್ಯಾತಿಯ ಅನಿಲ್ ಕುಂಬ್ಳೆ ಸಾಧನೆಗೆ 21 ವರ್ಷ

ನವದೆಹಲಿ,ಫೆ.7-`ಜಂಬೋ’ ಖ್ಯಾತಿಯ ಸ್ಪಿನ್ ಮಾಂತ್ರಿಕ, ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಮಾಡಿರುವ ಅಪರೂಪದ ಸಾಧನೆಗೆ ಇಂದು 21 ವರ್ಷ ತುಂಬಿದೆ.

1999ರಲ್ಲಿ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಇನ್ನಿಂಗ್ಸ್ ಒಂದರಲ್ಲೇ ಎಲ್ಲಾ ಹತ್ತು ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ್ದರು.

ಒಂದು ಇನ್ನಿಂಗ್ಸ್ ನ ಎಲ್ಲಾ ಹತ್ತು ವಿಕೆಟ್ ಪಡೆದ ಸಾಧನೆ ಮಾಡಿದ ಎರಡನೇ ಬೌಲರ್ ಎಂಬ ಖ್ಯಾತಿಗೆ ಅನಿಲ್ ಕುಂಬ್ಳೆ ಪಾತ್ರರಾದರು. ಅದಕ್ಕಿಂತ ಮೊದಲು ಜಿಮ್ ಲೇಕರ್ ಈ ಸಾಧನೆ ಮಾಡಿದ್ದರು.

ಅಂದಿನ ಪಂದ್ಯದಲ್ಲಿ 26.3 ಓವರ್ ಎಸೆದಿದ್ದ ಕುಂಬ್ಳೆ ನೀಡಿದ್ದು ಕೇವಲ 74 ರನ್ ನೀಡಿ 10 ವಿಕೆಟ್ ಕಬಳಿಸಿದ್ದರು. ಅಂದಿನ ಪಂದ್ಯದಲ್ಲಿ ಭಾರತಕ್ಕೆ 212 ರನ್ ಗಳ ಭರ್ಜರಿ ಜಯ ದಾಖಲಿಸಿತು.

ಎರಡು ಟೆಸ್ಟ್ ಪಂದ್ಯಗಳ ಸರಣಿ ಆಡಲು ಭಾರತಕ್ಕೆ ಬಂದಿದ್ದ ಪಾಕಿಸ್ತಾನ ತಂಡ ಚೆನ್ನೈನಲ್ಲಿ ಮೊದಲ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆ ಪಡೆದಿತ್ತು. ಎರಡನೇ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದ್ದ ಟೀಂ ಇಂಡಿಯಾ ಗೆಲುವಿನ ನಗೆ ಬೀರಲು ಅನಿಲ್ ಕುಂಬ್ಳೆ ಕಾರಣರಾದರು.

ದಿಲ್ಲಿ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಅಜರುದ್ದೀನ್ ನಾಯಕತ್ವದ ಭಾರತ 252 ರನ್ ಗಳಿಸಿತ್ತು. ಕುಂಬ್ಳೆ ಮತ್ತು ಹರ್ಭಜನ್ ದಾಳಿಗೆ ನಲುಗಿದ್ದ ಪಾಕ್ ಮೊದಲ ಇನ್ನಿಂಗ್ಸ್ ನಲ್ಲಿ 172 ರನ್ ಗೆ ಆಲ್ ಔಟ್ ಆಗಿತ್ತು. ಕುಂಬ್ಳೆ 4 ಮತ್ತು ಹರ್ಭಜನ್ ಸಿಂಗ್ ಮೂರು ವಿಕೆಟ್ ಪಡೆದಿದ್ದರು.

ಎರಡನೇ ಇನ್ನಿಂಗ್ಸ್ ನಲ್ಲಿ ಸದಗೋಪನ್ ರಮೇಶ್ ಅವರ 96 ರನ್ ನೆರವಿನಿಂದ ಭಾರತ 339 ರನ್ ಗಳಿಸಿತು. ಪಂದ್ಯ ಗೆಲ್ಲಲು ಪಾಕ್ ಗೆ 420 ರನ್ಗಳ ಗುರಿ ನೀಡಲಾಯಿತು. ಬ್ಯಾಟಿಂಗ್ ಅರಂಭಿಸಿದ ಸಯೀದ್ ಅನ್ವರ್ ಮತ್ತು ಶಾಹಿದ್ ಅಫ್ರಿದಿ ಮೊದಲ ವಿಕೆಟ್ ಗೆ 101 ರನ್ ಗಳಿಸಿದರು. ಆಗ ಕುಂಬ್ಳೆ ಬೌಲಿಂಗ್ ನಲ್ಲಿ ನಯನ್ ಮೊಂಗಿಯಾ ಹಿಡಿದ ಉತ್ತಮ ಕ್ಯಾಚ್ ಗೆ ಅಫ್ರಿದಿ ಔಟಾದರು. ನಂತರ ಆರಂಭವಾಗಿದ್ದು ಕುಂಬ್ಳೆ ಜಾದೂ. (ಎಂ.ಎನ್)

Leave a Reply

comments

Related Articles

error: