ಕರ್ನಾಟಕ

ಬೆಂಗಳೂರು: ವಾಲಿದ್ದ 4 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಆರಂಭ

ಬೆಂಗಳೂರು,ಫೆ.7-ಎರಡು ದಿನಗಳ ಹಿಂದೆ ಬೆಂಗಳೂರಿನ ಹೆಬ್ಬಾಳದ ಕೆಂಪಾಪುರದಲ್ಲಿ ವಾಲಿದ್ದ ನಾಲ್ಕು ಅಂತಸ್ತಿನ ಪಿಜಿ ಕಟ್ಟಡದ ತೆರವು ಕಾರ್ಯಾಚರಣೆಯನ್ನು ಇಂದು ಬಿಬಿಎಂಪಿ ಆರಂಭಿಸಿದೆ.

ಕಟ್ಟಡ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಕಟ್ಟಡದಲ್ಲಿದ್ದ 30 ಮಂದಿ ಹಾಗೂ ಅಕ್ಕಪಕ್ಕದ ಮನೆಗಳಲ್ಲಿ ವಾಸವಾಗಿದ್ದ 100ಕ್ಕೂ ಹೆಚ್ಚು ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಅವರಿಗೆ ಉಳಿದುಕೊಳ್ಳಲು ಬೇರೆ ಕಡೆ ವ್ಯವಸ್ಥೆ ಕಲ್ಪಿಸಲಾಗಿದೆ.

ಅಕ್ಕಪಕ್ಕದ ಕಟ್ಟಡಗಳಿಗೆ ಯಾವುದೇ ಹಾನಿ ಉಂಟಾಗದಂತೆ ಕಟ್ಟಡವನ್ನು ನೆಲಸಮ ಮಾಡುವ ಕಾರ್ಯದಲ್ಲಿ ಬಿಬಿಎಂಪಿ ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ತೊಡಗಿದ್ದಾರೆ. ಇನ್ನೂ 4ರಿಂದ 5 ದಿನಗಳ ಕಾಲ ಕಟ್ಟಡ ತೆರವು ಕಾರ್ಯಾಚರಣೆ ಮುಂದುವರೆಯಲಿದೆ.

ನಿನ್ನೆ ಕಟ್ಟಡದ ಟೆರೇಸ್ ಒಡೆಯಲು ಮುಂದಾಗಿದ್ದ ಅಧಿಕಾರಿಗಳು ಡ್ರಿಲ್ಲಿಂಗ್ ಮಷಿನ್ ಮೂಲಕ ತೆರವಿಗೆ ಪ್ರಯತ್ನಿಸಿದ್ದರು. ಈ ವೇಳೆ ಕಟ್ಟಡ ಮತ್ತೊಂದು ಕಡೆ ವಾಲಿತ್ತು. ಕೂಡಲೇ ಅಧಿಕಾರಿಗಳು ಸಿಬ್ಬಂದಿಯನ್ನು ಕೆಳಗಿಳಿಸಿದ್ದರು.

ಫೆ. 5ರಂದು ಈ ನಾಲ್ಕು ಅಂತಸ್ತಿನ ಕಟ್ಟಡದ ಪಕ್ಕದಲ್ಲಿ ಪಾಯ ಅಗೆಯುತ್ತಿದ್ದಾಗ ಕಟ್ಟಡ ವಾಲಿತ್ತು. ರಾಹುಲ್ ಎಂಬುವವರಿಗೆ ಸೇರಿದ ಕಟ್ಟಡ ಇದಾಗಿದೆ. 5 ವರ್ಷದ ಹಿಂದೆ ಕಟ್ಟಿದ್ದ ಈ ಕಟ್ಟಡದ ಸಮೀಪದಲ್ಲಿ ಹೊಸ ಕಟ್ಟಡ ನಿರ್ಮಾಣದ ಕಾಮಗಾರಿ ಆರಂಭವಾಗಿತ್ತು. ಅದಕ್ಕೆ ಪಾಯ ತೆಗೆದ ಪರಿಣಾಮ ಈ ಕಟ್ಟಡ ವಾಲಿದೆ. ನಿವೇಶನಕ್ಕೆ ಹೊಂದಿಕೊಂಡಿದ್ದ ಕಟ್ಟಡದ ಅಡಿಪಾಯಕ್ಕಿಂತ ಆಳವಾದ ಪಾಯ ತೋಡಿದ್ದರಿಂದ ನಿರ್ಮಾಣಗೊಂಡಿದ್ದ ಕಟ್ಟಡದ ಅಡಿಪಾಯ ಸಡಿಲವಾಗಿ‌ದೆ.

ಪಕ್ಕದ ನಿವೇಶನ ಬಾಬು ಎಂಬುವವರಿಗೆ ಸೇರಿದ್ದಾಗಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಬು ಅವರೊಂದಿಗೆ ಗುತ್ತಿಗೆದಾರ ಮತ್ತು ಇಂಜಿನಿಯರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಬಿಬಿಎಂಪಿ ಆಯುಕ್ತರು ಸೂಚಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: