ಕ್ರೀಡೆ

ತ್ರಿಕೋನ ಟಿ20 ಸರಣಿ: ಭಾರತ ವನಿತೆಯರ ತಂಡದ ಫೈನಲ್ ಆಸೆ ಜೀವಂತ

ಮೆಲ್ಬೋರ್ನ್,ಫೆ.8-ತ್ರಿಕೋನ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಳು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿರುವ ಭಾರತೀಯ ವನಿತೆಯರ ತಂಡದ ಫೈನಲ್ ಆಸೆ ಜೀವಂತವಾಗಿದೆ.

ಮೆಲ್ಬೋರ್ನ್‌ನ ಜಂಕ್ಷನ್ ಓವಲ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಗೆಲ್ಲಲೇಬೇಕಾದ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿದೆ.

ಆಸೀಸ್ ತಂಡ ನೀಡಿದ್ದ 174 ರನ್‌ಗಳ ಗುರಿ ಬೆನ್ನಟ್ಟಿದ ಭಾರತೀಯ ವನಿತೆಯರ ತಂಡ ಶಫಾಲಿ ವರ್ಮಾ (49), ಸ್ಮೃತಿ ಮಂಧಾನಾ (55) ನೆರವಿನಿಂದ 19.4 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು. ಇದರೊಂದಿಗೆ ಆಸೀಸ್ ಬ್ಯಾಟ್ಸ್‌ವುಮೆನ್ ಆಶ್ಲೀ ಗಾರ್ಡ್ನರ್ ಹೋರಾಟವು ವ್ಯರ್ಥವೆನಿಸಿತು.

ಭಾರತಕ್ಕೆ ಯುವ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಬಿರುಸಿನ ಆರಂಭವೊದಗಿಸಿದರು. ಆಸೀಸ್ ವೇಗದ ದಾಳಿಯನ್ನು ಧೂಳೀಪಟಗೈದರು. ಆದರೆ ಕೇವಲ ಒಂದು ರನ್ ಅಂತರದಿಂದ ಅರ್ಧಶತಕ ಮಿಸ್ ಮಾಡಿಕೊಂಡರು. ಆದರೂ ಸ್ಮೃತಿ ಮಂಧಾನಾ ಜೊತೆಗೆ ಮೊದಲ ವಿಕೆಟ್‌ಗೆ 85 ರನ್‌ಗಳ ಜತೆಯಾಟ ನೀಡಿದರು. ಕೇವಲ 28 ಎಸೆತಗಳನ್ನು ಎದುರಿಸಿದ ಶಫಾಲಿ ಎಂಟು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 49 ರನ್ ಗಳಿಸಿದರು.

ಶಫಾಲಿ ಪತನದ ಬಳಿಕ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದ ಮಂಧಾನಾ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ನಡುವೆ 19 ಎಸೆತಗಳಲ್ಲಿ ಐದು ಬೌಂಡರಿಗಳಿಂದ 30 ರನ್ ಗಳಿಸಿದ ಜೆಮಿಮಾ ರೊಡ್ರಿಗಸ್ ಅಮೂಲ್ಯ ಇನ್ನಿಂಗ್ಸ್ ಕಟ್ಟಿದರು.

ಅತ್ತ ಗೆಲುವಿನಂಚಿನಲ್ಲಿ ವಿಕೆಟ್ ಒಪ್ಪಿಸಿದ ಮಂಧಾನಾ 48 ಎಸೆತಗಳಲ್ಲಿ ಏಳು ಬೌಂಡರಿಗಳಿಂದ 55 ರನ್ ಗಳಿಸಿದರು. ಇನ್ನುಳಿದಂತೆ ನಾಯಕಿ ಹರ್ಮನ್‌ಪ್ರೀತ್ ಕೌರ್ (20*) ಹಾಗೂ ದೀಪ್ತಿ ಶರ್ಮಾ (11*) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಇದಕ್ಕೂ ಮೊದಲು ಆಶ್ಲೀ ಗಾರ್ಡ್ನರ್ ಅಮೋಘ ಆಟದ ನೆರವಿನಿಂದ ಆಸ್ಟ್ರೇಲಿಯಾ ಐದು ವಿಕೆಟ್ ನಷ್ಟಕ್ಕೆ 173 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಕೇವಲ 57 ಎಸೆತಗಳನ್ನು ಎದುರಿಸಿದ ಗಾರ್ಡ್ನರ್ 11 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳಿಂದ 93 ರನ್ ಗಳಿಸಿದರು. ಈ ಮೂಲಕ ಕೇವಲ ಏಳು ರನ್ ಅಂತರದಿಂದ ಶತಕ ಮಿಸ್ ಮಾಡಿಕೊಂಡರು. ನಾಯಕಿ ಮೆಗ್ ಲ್ಯಾನಿಂಗ್ ಸಹ 37 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಭಾರತ ಪರ ದೀಪ್ತಿ ಶರ್ಮಾ ಎರಡು ವಿಕೆಟ್ ಕಬಳಿಸಿದರು.

ಈ ಗೆಲುವಿನೊಂದಿಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಗೆಲುವು ಹಾಗೂ ಸೋಲು ದಾಖಲಿಸಿರುವ ಭಾರತ ಒಟ್ಟು 4 ಅಂಕಗಳನ್ನು ಸಂಪಾದಿಸಿದೆ. ಈ ಮೂಲಕ ಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ. ಆದರೂ ರನ್ ರೇಟ್ ನೆಗೆಟಿವ್ ಆಗಿರುವುದು ಹಿನ್ನೆಡೆಗೆ ಕಾರಣವಾಗಿದೆ. ಇದೀಗ ಫೈನಲ್ ಪ್ರವೇಶಿಸಲು ಅಂತಿಮ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸೀಸ್ ಸೋಲಿಗಾಗಿ ಕಾಯಬೇಕಿದೆ. (ಎಂ.ಎನ್)

 

Leave a Reply

comments

Related Articles

error: