ಕ್ರೀಡೆ

ಕಿವೀಸ್ ವಿರುದ್ಧ ಭಾರತಕ್ಕೆ ಏಕದಿನ ಸರಣಿ ಸೋಲು

ಹ್ಯಾಮಿಲ್ಟನ್,ಫೆ.8-ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 22 ರನ್ ಗಳ ಸೋಲಿಗೆ ಶರಣಾಗಿದೆ. ಇದರೊಂದಿಗೆ ಕಿವೀಸ್ ನೆಲದಲ್ಲಿ ಭಾರತ ಏಕದಿನ ಸರಣಿಯಲ್ಲಿ 0-2 ಅಂತರದ ಸರಣಿ ಸೋಲಿನ ಮುಖಭಂಗಕ್ಕೊಳಗಾಗಿದೆ.

ಇಲ್ಲಿನ ಈಡೆನ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕಿವೀಸ್ ತಂಡ ನೀಡಿದ್ದ 273 ರನ್‌ಗಳ ಬೆನ್ನತ್ತಿದ ಟೀಂ ಇಂಡಿಯಾ 48.3 ಓವರ್‌ಗಳಲ್ಲಿ 251 ರನ್‌ಗಳಿಗೆ ಸರ್ವಪತನವನ್ನು ಕಂಡಿತು. ಕಿವೀಸ್ ಇದರೊಂದಿಗೆ ಇನ್ನೊಂದು ಪಂದ್ಯ ಬಾಕಿ ಉಳಿದಿರುವಂತೆಯೇ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ.

ಟೀಂ ಇಂಡಿಯಾದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾದ ಪೃಥ್ವಿ ಶಾ (24) ಹಾಗೂ ಮಯಾಂಕ್ ಅಗರ್ವಾಲ್ (3)  ಬೇಗನೆ ವಿಕೆಟ್ ಒಪ್ಪಿಸಿದರು. ಶ್ರೇಯಸ್ ಅಯ್ಯರ್ (52), ರವೀಂದ್ರ ಜಡೇಜಾ (55), ನವದೀಪ್ ಸೈನಿ (45) ಹೊರತುಪಡಿಸಿ ಯಾರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ವಿರಾಟ್ ಕೊಹ್ಲಿ (15), ಕೆಎಲ್ ರಾಹುಲ್ (4), ಕೇದಾರ್ ಜಾಧವ್ (9), ಶಾರ್ದೂಲ್ ಠಾಕೂರ್ (18), ಯುಜ್ವೇಂದ್ರ ಚಹಲ್ (10) ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಕಿವೀಸ್ ಪರ ಹಮೀಶ್ ಬೆನೆಟ್, ಟಿಮ್ ಸೌಥಿ, ಕೈಲ್ ಜಾಮಿಸನ್, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ ತಲಾ ಎರಡು ವಿಕೆಟ್ ಪಡೆದರೆ ಜೇಮ್ಸ್ ನೀಶಮ್ ಒಂದು ವಿಕೆಟ್ ಕಬಳಿಸಿದರು.

ಇದಕ್ಕೂ ಮುನ್ನ ಕಿವೀಸ್ ಆರಂಭಿಕ ಮಾರ್ಟಿನ್ ಗಪ್ಟಿಲ್ (79) ಹಾಗೂ ಅನುಭವಿ ರಾಸ್ ಟೇಲರ್ ಆಕರ್ಷಕ ಅರ್ಧಶತಕಗಳ (73*) ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 273 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತ್ತು.

ಅಂತಿಮ ಹಂತದಲ್ಲಿ 9ನೇ ವಿಕೆಟ್ ನಲ್ಲಿ ರಾಸ್ ಟೇಲರ್ ಮತ್ತು ಜೇಮಿಸನ್ ಜೋಡಿ ಮುರಿಯದ 76ರನ್ ಗಳ ದಾಖಲೆಯ ಜೊತೆಯಾಟವಾಡಿ ನ್ಯೂಜಿಲೆಂಡ್ ತಂಡ 250ರ ಗಡಿ ದಾಟುವಂತೆ ಮಾಡಿದರು.

ಭಾರತದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಶಾರ್ದೂಲ್ ಠಾಕೂರ್ 3 ವಿಕೆಟ್ ಪಡೆದು ಮಿಂಚಿದರೆ, ನವದೀಪ್ ಸೈನಿ 2 ಮತ್ತು ಯುಜ್ವೇಂದ್ರ ಚಹಲ್ 1 ವಿಕೆಟ್ ಪಡೆದರು. (ಎಂ.ಎನ್)

Leave a Reply

comments

Related Articles

error: