ಪ್ರಮುಖ ಸುದ್ದಿ

ಅರೆಭಾಷೆ ಸಂಸ್ಕೃತಿಲಿ ಕಿಡ್ಡಾಸ ಹಬ್ಬ : ಕೀಳರಿಮೆಯಿಂದಲೇ ಅರೆಭಾಷೆ ಅವನತಿಯತ್ತ ಸಾಗುತ್ತಿದೆ : ಅಕಾಡಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಆತಂಕ

ರಾಜ್ಯ( ಮಡಿಕೇರಿ) ಫೆ.9 :- ಇಂಗ್ಲೀಷ್ ಭಾಷೆಯ ಪ್ರಭಾವ ಅರೆಭಾಷೆಯ ಮೇಲೂ ಬೀರಿದ್ದು, ಕೀಳರಿಮೆಯಿಂದಲೇ ಅರೆಭಾಷೆ ಅವನತಿಯತ್ತ ಸಾಗುತ್ತಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ವತಿಯಿಂದ, ಬಲ್ಲೈೀರಿ ಯಾನೆ ಪಟ್ಟಡ ಕುಟುಂಬಸ್ಥರ ಜೀರ್ಣೋದ್ಧಾರ ಸಂಘ ಮತ್ತು ಆವಂದೂರು ಗ್ರಾಮಸ್ಥರು ಇವರ ಸಹಕಾರದಲ್ಲಿ ಶನಿವಾರ ಆವಂದೂರಿನ ಪಟ್ಟಡ ದೊಡ್ಡಮನೆ ಆವರಣದಲ್ಲಿ ನಡೆದ ‘ಅರೆಭಾಷೆ ಸಂಸ್ಕೃತಿಲಿ ಕಿಡ್ಡಾಸ ಹಬ್ಬ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶೈಕ್ಷಣಿಕವಾಗಿ ನಾವು ಬೆಳೆದಂತೆ ಬೇರೆ-ಬೇರೆ ಭಾಷೆಗಳನ್ನು ಕಲಿಯಬೇಕು. ಮಾತೃ ಭಾಷೆಯಾದ ಅರೆಭಾಷೆಯ ಬಗ್ಗೆ ಪ್ರೀತಿ ಹೆಚ್ಚಾಗಬೇಕೆ ಹೊರತು ಕೀಳರಿಮೆ ಮೂಡಬಾರದು ಎಂದರು. 2012 ರಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಆರಂಭಗೊಂಡಿದ್ದು, ಕೇಂದ್ರ ಸಚಿವ ಸದಾನಂದಗೌಡರು ಹಾಗೂ ಶಾಸಕ ಕೆ.ಜಿ.ಬೋಪಯ್ಯ ಅವರ ಸಹಕಾರವನ್ನು ನೆನೆಯುವುದಾಗಿ ತಿಳಿಸಿದರು.
ಇಂದು ಮೂಲಭೂತ ಸೌಕರ್ಯ ಎಲ್ಲರಿಗೂ ದೊರೆಯುವಂತಾಗಿದೆ, ಆದರೆ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ನಾವು ದೂರವಾಗುತ್ತಿದ್ದೇವೆ. ಅರೆಭಾಷೆ ಸಂಸ್ಕೃತಿ, ಆಚಾರ, ವಿಚಾರಗಳಿಂದ ನಾವು ದೂರವಾಗದೆ ಭಾಷಾ ಅಭಿಮಾನ ಮೆರೆಯಬೇಕೆಂದು ಲಕ್ಷ್ಮೀನಾರಾಯಣ ಕಜೆಗದ್ದೆ ಹೇಳಿದರು.
ಅಕಾಡಮಿ ಮೂಲಕ ಕೇವಲ ಹಬ್ಬಗಳ ಆಚರಣೆ ಮಾತ್ರ ಮಾಡಿದರೆ ಸಾಲದು, ಅರೆಭಾಷೆ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಕಾರ್ಯಾಗಾರ, ವಿಚಾರಗೋಷ್ಠಿಗಳು, ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಭಾಷಾ ಬೆಳವಣಿಗೆಗೆ ಶ್ರಮಿಸಬೇಕಾಗಿದೆ ಎಂದರು.
ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕವೂ ಅರೆಭಾಷಾ ಸಂಸ್ಕೃತಿಯನ್ನು ಬೆಳೆಸುವ ಕಾರ್ಯವಾಗಬೇಕು. ಅರೆಭಾಷೆಯ ಬೆಳವಣಿಗೆಗೆ ಪೂರಕವಾಗಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಮೂಡಿಬರಲಿ ಎಂದು ಲಕ್ಷ್ಮೀನಾರಾಯಣ ಕಜೆಗದ್ದೆ ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಪಂ ಸದಸ್ಯರಾದ ಯಾಲದಾಳು ಪದ್ಮಾವತಿ ಅರೆಭಾಷೆ ಸಮುದಾಯದ ಆಚರಣೆಗಳನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ, ಮುಂದಿನ ಪೀಳಿಗೆಗೆ ಈ ಸಂಸ್ಕೃತಿಯಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕು. ಮಕ್ಕಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಅರೆಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಲಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಡಿಕೇರಿ ತಾ.ಪಂ ಸದಸ್ಯ ಕೊಡಪಾಲು ಗಪ್ಪು ಗಣಪತಿ ಅವರು, ಒಂದು ಕಾಲದಲ್ಲಿ ಆವಂದೂರನ್ನು ಕುಗ್ರಾಮ ಎನ್ನುತ್ತಿದ್ದರು. ಆದರೆ ಇಂದು ಈ ಗ್ರಾಮ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಹಾಗೂ ಪಟ್ಟಡ ಕುಟುಂಬಸ್ಥರು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಕ್ಕೆ ಸಂತಸವಿದೆ ಎಂದರು.
ನಾವು ಈ ಅರೆಭಾಷೆಯನ್ನು ಬೆಳೆಸುವುದರ ಜೊತೆಗೆ ಇದರ ಸಂಸ್ಕೃತಿ ಮತ್ತು ಪದ್ಧತಿ ಹಾಗೂ ಜನಾಂಗವನ್ನು ಬೆಳೆಸಬೇಕು. ಮೊಬೈಲ್ ಬಳಕೆ ಇಂದು ವ್ಯಾಪಕವಾಗಿದೆ. ಯುವ ಜನಾಂಗ ಇವೆಲ್ಲವನ್ನು ಬಿಟ್ಟು ಅರೆಭಾಷೆ ಸಂಸ್ಕೃತಿ ಉಳಿಸಿ ಬೆಳೆಸಲಿ ಎಂದು ಕಿವಿಮಾತು ಹೇಳಿದರು.
ನಾವು ಭೂಮಿಯ ಮೇಲೆ ಬದುಕುತ್ತಿರುವುದಕ್ಕೆ ಮತ್ತು ಬೇಸಾಯ ಮಾಡಿ ಬೆಳೆ ಬೆಳೆಯುತ್ತಿರುವುದಕ್ಕೆ ಭೂಮಿ ತಾಯಿಗೆ ಪೂಜಿಸುತ್ತೇ. ಭೂಮಿ ಇಲ್ಲದೆ ಏನೂ ಮಾಡಲಾಗದು. ಭೂಮಿಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಭೂಮಿಯಲ್ಲಿ ನಾಟಿ ನೆಟ್ಟು ಕೆಲಸಮಾಡಬೇಕು. ಇದರಿಂದ ಭೂಮಿ ಹಸನಾಗಿರುತ್ತದೆ. ಭೂಮಿಯನ್ನು ನಂಬಿದರೆ ಎಂದೂ ನಷ್ಟವಿಲ್ಲ . ಈ ಪರಂಪರೆಯನ್ನು ಉಳಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಡಿಕೇರಿ ತಾ.ಪಂ ಸದಸ್ಯರಾದ ತುಮುತ್ತಜೀರ ಕುಮುದಾ ಅವರು, ಅರೆಭಾಷೆಯನ್ನು ಮಾತನಾಡುವ ಜನಾಂಗ ತನ್ನ ಸಂಸ್ಕೃತಿಯನ್ನು ದೇಶವ್ಯಾಪಿ ಬೆಳೆಸುವಂತಾಗಲಿ ಎಂದು ತಿಳಿಸಿದರು.
ಮದೆ ಗ್ರಾ.ಪಂ ಅಧ್ಯಕ್ಷ ಮುದ್ಯನ ಚಂದ್ರಶೇಖರ್ ಮಾತನಾಡಿ, ಎರಡು ವರ್ಷದ ಹಿಂದೆ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ವತಿಯಿಂದ ಕೆಸರುಗದ್ದೆ ಓಟವನ್ನು ನಡೆಸಲಾಗಿತ್ತು. ಇದೀಗೆ ಮತ್ತೆ ಕಿಡ್ಡಾಸ ಹಬ್ಬವನ್ನು ಆಚರಿಸುತ್ತಿರುವುದು ಸಂತಸದ ವಿಚಾರ ಎಂದರು. ಎಲ್ಲಾ ಭಾಷೆಯನ್ನು ಕಲಿಯುವುದರೊಂದಿಗೆ ಈ ಅರೆಭಾಷೆಯನ್ನೂ ಸಹ ಉಳಿಸಿಬೆಳೆಸಿಕೊಳ್ಳುವ ಕಾರ್ಯವಾಗಬೇಕು ಎಂದರು.
ಅತಿಥಿಗಳು ಹಾಗೂ ಗ್ರಾಮದ ಹಿರಿಯರಿಂದ ಭೂಮಿತಾಯಿಯ ಪೂಜೆ ಮತ್ತು ಐನ್‍ಮನೆಯಲ್ಲಿ ವೆಂಕಟ್ರಮಣ ದೇವರ ಪೂಜೆಯನ್ನು ನೆರೆವೇರಿಸಲಾಯಿತು. ಗ್ರಾಮದ ಕಲಾವಿದರಿಗೆ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ವತಿಯಿಂದ ಸಾಂಸ್ಕೃತಿಕ ಪರಿಕರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮದೆ ಗ್ರಾಮಪಂಚಾಯತ್ ಸದಸ್ಯರಾದ ಕಾಳೇರಮ್ಮನ ಅಶೋಕ ಅಯ್ಯಣ್ಣ, ಸವಿತಾ ಆಚಾರ್ಯ, ಪಟ್ಟಡ ಕುಟುಂಬದ ಪಟ್ಟೆದಾರರಾದ ಪಟ್ಟಡ ಕಾವೇರಪ್ಪ, ಪ್ರಚಾರ ಸಮಿತಿಯ ಪಟ್ಟಡ ಪ್ರಭಾಕರ್, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಸದಸ್ಯರಾದ ಚೊಕ್ಕಾಡಿ ಪ್ರೇಮ ರಾಘವಯ್ಯ ಸೇರಿದಂತೆ ಇತರರು ಹಾಜರಿದ್ದರು.
ಕಡ್ಯದ ಪಾರ್ವತಿ ಮತ್ತು ತಂಡದವರು ಪ್ರಾರ್ಥನೆ ನೆರವೇರಿಸಿದರು, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಸದಸ್ಯರಾದ ಬೈತಡ್ಕ ಜಾನಕಿ ಅವರು ಸ್ವಾಗತ ಗೀತೆಯನ್ನು ಹಾಡಿದರು. ಧನಂಜಯ ಅಗೋಳಿಕಜೆ ಸ್ವಾಗತಿಸಿದರು, ಪಟ್ಟಡ ರೀನಾ ದೀಪಕ್ ವಂದಿಸಿದರು, ಪಟ್ಟಡ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: