ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಕೂರ್ಗ್ ಫ್ಲೇವರ್ಸ್ ಉತ್ಪನ್ನಗಳ ಮಳಿಗೆ ಪ್ರಾರಂಭ

ರಾಜ್ಯ( ಮಡಿಕೇರಿ)ಫೆ.9:- ಪ್ರಕೃತಿ ವಿಕೋಪಕ್ಕೊಳಗಾಗಿದ್ದ ಕಾಲೂರು ಗ್ರಾಮದ ಮಹಿಳೆಯರು ಉತ್ಪಾದಿಸಿದ ಮಸಾಲೆ ಪದಾರ್ಥಗಳ ಮಾರಾಟ ಮಳಿಗೆ ಇದೀಗ ಬೆಂಗಳೂರಿನಲ್ಲಿಯೂ ಪ್ರಾರಂಭಗೊಳ್ಳುತ್ತಿದೆ.

2018 ರ ನವಂಬರ್ ನಲ್ಲಿ ಕಾಲೂರು ಗ್ರಾಮದ ಮಹಿಳೆಯರು ಭಾರತೀಯ ವಿದ್ಯಾಭವನದ ಪ್ರಾಜೆಕ್ಟ್ ಕೂರ್ಗ್ ವತಿಯಿಂದ ಯಶಸ್ವಿ ಯೋಜನೆಯಡಿ ವೈವಿಧ್ಯಮಯ ಮಸಾಲೆ ಪದಾರ್ಥಗಳನ್ನು ತಯಾರಿಸಿ ಮಾರಾಟಕ್ಕೆ ಮುಂದಾಗಿದ್ದರು. ಮಳೆ ಹಾನಿ ಸಂತ್ರಸ್ತ ಮಹಿಳೆಯರೇ ಉತ್ಪಾದಿಸಿದ ಕೂರ್ಗ್ ಫ್ಲೇವರ್ಸ್ ಹೆಸರಿನ ಉತ್ಪನ್ನಗಳನ್ನು ಮಡಿಕೇರಿಯ ರಾಜಾಸೀಟ್ ಮತ್ತು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಬಳಿಯ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಹಾಗೇ ಕೂರ್ಗ್ ಫ್ಲೇವರ್ಸ್ ತನ್ನ ಸಂಚಾರಿ ವಾಹನದ ಮೂಲಕವೂ ವಿವಿಧ ಊರುಗಳಿಗೆ ತೆರಳಿ ಮಾರಾಟ ಮಾಡುವ ಮೂಲಕ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ನೆರವು ಕಲ್ಪಿಸಲಾಗಿತ್ತು.

ಇದೀಗ ಬೆಂಗಳೂರು ನಗರದ ಶೇಷಾದ್ರಿಪುರಂನ ಹೈಸ್ಕೂಲ್ ನ ಎದುರು (ಮಂತ್ರಿ ಮಾಲ್ ಬಳಿ) ಕೂರ್ಗ್ ಫ್ಲೇವರ್ಸ್ ನ ಉತ್ಪನ್ನಗಳ ಹೊಸತೊಂದು ಮಳಿಗೆಯು ಫೆಬ್ರುವರಿ 9ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ತೆರೆಯಲಿದೆ. ಇದು ಕಾಲೂರಿನ ಮಹಿಳೆಯರ ಸಾಧನೆಯ ಹಾದಿಯಲ್ಲಿ ಮತ್ತೊಂದು ಹೆಜ್ಜೆಗುರುತಾಗಿದೆ ಎಂದು ಪ್ರಾಜೆಕ್ಟ್ ಕೂರ್ಗ್ ಸಂಚಾಲಕ ಬಾಲಾಜಿ ಕಶ್ಯಪ್ ತಿಳಿಸಿದ್ದಾರೆ. ಕೊಡಗಿನ ಕಾಫಿ, ಜೇನು ಸೇರಿದಂತೆ ಕಾಲೂರು ಗ್ರಾಮದ ಮಹಿಳೆಯರು ತಮ್ಮೂರಿನ ಸುಸಜ್ಜಿತ ಘಟಕದಲ್ಲಿ ಉತ್ಪಾದಿಸಿದ ಮಸಾಲೆ ಪದಾರ್ಥಗಳು ಈ ಮಳಿಗೆಯಲ್ಲಿ ಖರೀದಿಗೆ ಲಭ್ಯವಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: