ಮೈಸೂರು

ದೇಶದ ಪ್ರತಿಯೊಬ್ಬ ನಾಗರಿಕರೂ ಕಾನೂನನ್ನು ಗೌರವಿಸುವುದು ಅವರ ಆದ್ಯ ಕರ್ತವ್ಯ : ನಿವೃತ್ತ ನ್ಯಾಯಾಧೀಶ ನಾಗಮೋಹನದಾಸ್

ಮೈಸೂರು.ಫೆ.9:-  ದೇಶದ ಪ್ರತಿಯೊಬ್ಬ ನಾಗರಿಕರೂ ಕಾನೂನನ್ನು ಗೌರವಿಸುವುದು ಅವರ ಆದ್ಯ ಕರ್ತವ್ಯ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ನಾಗಮೋಹನದಾಸ್ ತಿಳಿಸಿದರು.

ಅವರು ಇಂದು ಬೆಳಿಗ್ಗೆ ನಗರದ ಜೆ.ಕೆ. ಮೈದಾನದ ಎಂ.ಎಂ.ಸಿ. ಅಲ್ಯೂಮಿನಿಯಂ ಸಭಾಗಣದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ 3 ನೇ ಪ್ರಾಂತೀಯ ಸಮ್ಮೇಳನವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ದೇಶಾದ್ಯಂತ ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ನ್ಯಾಯಾಂಗ ಇಲಾಖೆ  ಹಲವಾರು ರೀತಿಯ ಕಾನೂನುಗಳನ್ನು ರೂಪಿಸಿದೆ. ಈ ಕಾನೂನುಗಳನ್ನು ಗೌರವಿಸುವುದು ದೇಶದ ಎಲ್ಲ ಜನತೆಯ ಆದ್ಯಕರ್ತವ್ಯ. ಕಾನೂನುಗಳನ್ನು ಉಲ್ಲಂಘಿಸಿದವರಿಗೆ ಶಿಕ್ಷೆ ನೀಡುವ ಹಕ್ಕನ್ನು ನ್ಯಾಯಾಂಗ  ಇಲಾಖೆ  ಹೊಂದಿದೆ ಎಂದರು.

ದೇಶವು ಶೀಘ್ರವಾಗಿ ಮುಂದುವರೆಯುತ್ತಿದ್ದರೂ ಕೆಲವರು ಕಾನೂನುಗಳನ್ನು ಉಲ್ಲಂಘಿಸಿ ನಡೆಯುತ್ತಿರುವುದು ಒಂದು ಕಪ್ಪು ಚುಕ್ಕಿ ಇದ್ದಂತೆ. ಯಾರು ಕಾನೂನುಗಳನ್ನು ಗೌರವಿಸುತ್ತಾರೋ ಅವರನ್ನು ಕಾನೂನು ರಕ್ಷಿಸುತ್ತದೆ  ಎಂಬ ವೇದ ವಾಕ್ಯದಂತೆ ದೇಶದ ಸಮತ್ತ ಜನತೆ ನಡೆದುಕೊಳ್ಳಬೇಕೆಂದು ವಿನಂತಿಸಿದರು.

ಲಯನ್ಸ್ ಸಂಸ್ಥೆ ಸಮಾಜ ಸೇವೆಯಲ್ಲಿ ಮುಂದಿದ್ದು  ವಿಶ್ವದ 220 ದೇಶಗಳಲ್ಲಿ  ಕಾರ್ಯ ನಿರ್ವಹಿಸುತ್ತಿದೆ.  ಈ ಸಂಸ್ಧೆಯು 102 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದು ಸಮಾಜ ಸೇವೆಯನ್ನೇ ತನ್ನ ಪ್ರಥಮ ಗುರಿಯನ್ನಾಗಿರಿಸಿಕೊಂಡು ಪ್ರಕೃತಿ ವಿಕೋಪದಿಂದ ನೊಂದವರ ಸಹಾಯಕ್ಕೆ ಧಾವಿಸುವುದು, ಅಂಗವಿಕಲರಿಗೆ ಉಚಿತ ಉಪಕರಣಗಳನ್ನು ನೀಡುವುದು ,ರಕ್ತದಾನ ಶಿಬಿರ ಸೇರಿದಂತೆ ಇನ್ನಿತರ ಸಮಾಜಸೇವಾ ಕೆಲಸಗಳನ್ನು ಮಾಡುವುದರ ಮೂಲಕ ವಿಶ್ವಾದ್ಯಂತ ಖ್ಯಾತಿಗಳಿಸಿದೆ. ಮುಂದಿನ ದಿನಗಳಲ್ಲೂ ಇಂತಹ ಸಮಾಜ ಸೇವೆಯನ್ನು ನಿರಂತರವಾಗಿ ಕೈಗೊಳ್ಳುವಂತೆ ಲಯನ್ಸ್ ಸಂಸ್ಥೆಯ ರಾಜ್ಯಪಾಲರು ಹಾಗೂ ಅಧ್ಯಕ್ಷರಲ್ಲಿ ಮನವಿ ಮಾಡಿದರು.

ಮುಖ್ಯ ಅತಿಧಿಗಳಾಗಿ ಆಗಮಿಸಿದ್ದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಹೆಚ್.ಪಿ. ಸಂದೇಶ್ ಮಾತನಾಡಿ ಕಾನೂನುಗಳನ್ನು ಉಲ್ಲಂಘಿಸುವವರ ವಿರುದ್ಧ ನ್ಯಾಯಾಂಗ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಸರ್ಕಾರ ಅಧಿಕಾರ ನೀಡಿದೆ. ಕಾನೂನು ಎಲ್ಲರಿಗೂ ಒಂದೇ. ಹಾಗಾಗಿ ಇದನ್ನು ಗೌರವಿಸುವಂತೆ ಹೇಳಿದರು.

ಕಾರ್ಯಕ್ರಮದಲ್ಲಿ  ಲಯನ್ಸ್ ನ  ದೇವೇಗೌಡ, ವೆಂಕಟೇಶ್, ಡಾ.ನಾಗರಾಜ್ ವಿ.ಭೈರಿ , ಜಯರಾಮು ಸೇರಿದಂತೆ ಜಿಲ್ಲೆಯ 200ಕ್ಕೂ ಸದಸ್ಯರುಗಳು ಹಾಜರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಪಿ.ರಮೇಶ್ ವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: