ಪ್ರಮುಖ ಸುದ್ದಿ

ಅನಕ್ಷರತೆ ನಿರ್ಮೂಲನೆಗೆ ರೋಟರಿಯಿಂದ ಯೋಜನೆ

ರಾಜ್ಯ(ಮಡಿಕೇರಿ) ಫೆ.10:-  ರೋಟರಿ ಸಂಸ್ಥೆ ಪ್ರಸ್ತುತ ಸಂಪೂರ್ಣ ಸಾಕ್ಷರತಾ ಕಾರ್ಯಕ್ರಮದ ಮೂಲಕ ಅನಕ್ಷರತೆ ನಿರ್ಮೂಲನೆಗೆ ಯೋಜನೆ ರೂಪಿಸಿದೆ ಎಂದು ರೋಟರಿ 3181 ರ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯು ಹೇಳಿದರು.

ಕುಶಾಲನಗರ ರೋಟರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ, ಅಫ್ಘಾನಿಸ್ತಾನ ದೇಶಗಳನ್ನು ಹೊರತುಪಡಿಸಿದಂತೆ ವಿಶ್ವದ ಎಲ್ಲೆಡೆ ರೋಟರಿಯ ಪೊಲಿಯೊ ನಿರ್ಮೂಲನೆ ಯೋಜನೆ ಸಂಪೂರ್ಣ ಯಶಸ್ಸು ಸಾಧಿಸಿದೆ. ಇದೇ ಮಾದರಿಯಲ್ಲಿ ರೋಟರಿಯ ರಾಷ್ಟ್ರೀಯ ಯೋಜನೆಯಡಿ ಅನಕ್ಷರತೆ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿದೆ. ಟೀಚ್ ಎಂಬ ಕಾರ್ಯಕ್ರಮದ ಮೂಲಕ 2025 ರೊಳಗಾಗಿ ಸಂಪೂರ್ಣ ಸಾಕ್ಷರತೆ ಸಾಧಿಸುವ ಗುರಿ ಹೊಂದಲಾಗಿದೆ. ಗುಣಮಟ್ಟದ ಶಿಕ್ಷಣ, ವಯಸ್ಕರ ಶಿಕ್ಷಣದ ಮೂಲಕ ಅನಕ್ಷರತೆ ದೂರಮಾಡಲು ಕ್ರಮಕೈಗೊಳ್ಳಲಾಗಿದೆ ಎಂದರು.

ವಯೋವೃದ್ಧರಿಗೆ ನೆರವಾಗುವ ನಿಟ್ಟಿನಲ್ಲಿ ರೋಟರಿ 3181 ಕೂಡ ಜಿಲ್ಲಾಮಟ್ಟದಲ್ಲಿ ಜೀವನ್ ಸಂಧ್ಯಾ ಎಂಬ ಕಾರ್ಯಕ್ರಮ ರೂಪಿಸಿದ್ದು ಈ ಮೂಲಕ ವಯೋವೃದ್ಧರಿಗೆ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ಹರಿಸಲಾಗಿದೆ. ಇತರೆ ದೇಶಗಳಿಗೆ ಹೋಲಿಕೆ ಮಾಡಿದಲ್ಲಿ ಭಾರತದಲ್ಲಿ ವಯೋವೃದ್ಧರಿಗೆ ಅಗತ್ಯ ಸೌಲಭ್ಯಗಳು ಲಭ್ಯವಾಗುತ್ತಿಲ್ಲ. ನಿರ್ದಿಷ್ಟ ವಯೋಮಿತಿ ಬಳಿಕ ಹಿರಿಯರು ಕುಟುಂಬಕ್ಕೆ ಹೊರೆಯಾಗುವ ಮೂಲಕ ಕಡೆಗಣಿಸಲಾಗುತ್ತಿದ್ದು ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದರು. ವೃದ್ದಾಶ್ರಮಗಳು ಕೂಡ ಆರ್ಥಿಕ ಮುಗ್ಗಟ್ಟಿನಿಂದ ನಲುಗುತ್ತಿದ್ದು ಆಶ್ರಮ ವಾಸಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಪರದಾಡುವ ಸ್ಥಿತಿ ಉಂಟಾಗಿದೆ. ಈ ಸಮಸ್ಯೆಗಳನ್ನು ತೊಡೆದುಹಾಕಿ ಕಡೆಗಣನೆಗೆ ಒಳಗಾದವರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ರೋಟರಿ ಮುಂದಾಗಲಿದೆ ಎಂದರು.

ರೋಟರಿ ವಲಯ ಕಾರ್ಯದರ್ಶಿ ಎಚ್.ಟಿ.ಅನಿಲ್, ಪ್ರತಿನಿಧಿ ಎನ್.ಜಿ.ಪ್ರಕಾಶ್, ಕುಶಾಲನಗರ ರೋಟರಿ ಅಧ್ಯಕ್ಷ ಎಂ.ಡಿ.ಅಶೋಕ್, ಕಾರ್ಯದರ್ಶಿ ಸಂಜು ಬೆಳ್ಳಿಯಪ್ಪ, ಪ್ರಮುಖರಾದ ಕೆ.ಪಿ.ಚಂದ್ರಶೇಖರ್, ಉಲ್ಲಾಸ್ ಹಾಜರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: