ಮೈಸೂರು

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮನದಟ್ಟು ಆಗುವ ರೀತಿಯಲ್ಲಿ ಅರ್ಥ ಮಾಡಿಸಿ ಆತ್ಮಸ್ಥೈರ್ಯ ತುಂಬಿದ ಶಿಕ್ಷಕರು

ಮೈಸೂರು,ಫೆ.10:- ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ  ನಂಜನಗೂಡು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಿನ್ನೆ ಆಯೋಜಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಕರೆ ಮಾಡಿ ಪರೀಕ್ಷೆ ಕುರಿತಾದ ಗೊಂದಲದ ಪ್ರಶ್ನೆಗಳಿಗೆ ನುರಿತ ಶಿಕ್ಷಕರಿಂದ ಪರಿಹಾರ ಕಂಡುಕೊಂಡರು.

ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.30ವರೆಗೆ ನಿಗದಿಯಾಗಿದ್ದ ಫೋನ್ ಇನ್ ಕಾರ್ಯಕ್ರಮಕ್ಕೆ ಮೂರು ದೂರವಾಣಿ ನಂಬರ್‌ಗಳನ್ನು  ಮೂರೂ ದೂರವಾಣಿ ನಂಬರ್ ನೀಡಲಾಗಿದ್ದು, ಮೂರು ನಂಬರ್‌ಗಳಿಗೂ ಎಡೆಬಿಡದೆ ಕರೆಗಳು ಬರತೊಡಗಿದವು. ವಿದ್ಯಾರ್ಥಿಗಳ ಪಠ್ಯ ವಿಷಯಗಳಿಗೆ ಸಂಬಂಧಿತ ಪ್ರಶ್ನೆಗಳಿಗೆ ಆಯಾ ವಿಷಯದ ಶಿಕ್ಷಕರೇ ಉತ್ತರಿಸುವ ಮೂಲಕ ವಿದ್ಯಾರ್ಥಿಗಳ ಗೊಂದಲವನ್ನು ನಿವಾರಿಸಿದರು.

ಒಟ್ಟು 170 ಕರೆಗಳು ಬಂದಿದ್ದು, ಇದರಲ್ಲಿ ಗಣಿತ ವಿಷಯದ ಸಂಬಂಧ 93 ಗರಿಷ್ಠ ಕರೆಗಳು ಬಂದವು. ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚೆಯೇ ವಿದ್ಯಾರ್ಥಿಗಳಿಂದ ಕರೆಗಳು ಬರಲಾರಂಭಿಸಿದವು. ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳ ಬಗೆಗಿನ ಗೊಂದಲ, ಪಠ್ಯ ವಿಷಯಾಧಾರಿತ ಪ್ರಶ್ನೆಗಳನ್ನು ಸಾವಧಾನದಿಂದ ಆಲಿಸಿದ ಶಿಕ್ಷಕರು, ವಿದ್ಯಾರ್ಥಿಗಳಿಗೆ ಮನದಟ್ಟು ಆಗುವ ರೀತಿಯಲ್ಲಿ ಅರ್ಥ ಮಾಡಿಸಿ ಆತ್ಮಸ್ಥೈರ್ಯ ತುಂಬಿದರು.

ಗೊಂದಲದ ಪ್ರಶ್ನೆಗಳಿಗೆ ಉತ್ತರಿಸುವ ಜತೆಗೆ ಹಲವು ವಿದ್ಯಾರ್ಥಿಗಳಿಗೆ ಸಲಹೆಗಳನ್ನು ಕೊಟ್ಟರು. ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಾಗಾರ ನಡೆಸುವಂತೆ ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗುವ ಸ್ಥಿತಿಯಲ್ಲಿರುವ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಲು ಅಗತ್ಯ ಸಹಕಾರ ನೀಡುವ ನಿಟ್ಟಿನಲ್ಲಿ ಕಾರ್ಯಾಗಾರ ನಡೆಸುವಂತೆ ವಿದ್ಯಾರ್ಥಿಗಳಿಂದ ಸಲಹೆ ಕೇಳಿಬಂತು.

ನುರಿತ ಶಿಕ್ಷಕರಾಗಿ ಸಂಜಯ್‌ಕುಮಾರ್, ಶ್ರೀನಿವಾಸ್ ಶೆಟ್ಟಿಗಾರ್, ಮಧುಶ್ರೀ, ಶ್ರೀಕಂಠಮೂರ್ತಿ, ವಿಶ್ವನಾಥ್, ಡಾ.ಪದ್ಮಿನಿ, ಲತಾ, ಹರ್ಷ, ಸತೀಶ್, ಮಹೇಶ್, ಪ್ರದೀಪ್, ಮಧು, ಮಹೇಶ್ ಪಾಲ್ಗೊಂಡಿದ್ದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಶಾಲೆಯ ಅವಧಿ ಹೊರತುಪಡಿಸಿ ಸಂಜೆ 7ವರೆಗೆ ವಿದ್ಯಾರ್ಥಿಗಳು ಹೆಚ್ಚುವರಿ ಸಮಯ ಅಧ್ಯಯನಕ್ಕೆ ಒತ್ತು ನೀಡುವಂತೆ ಶಿಕ್ಷಕರಿಗೆ ಖಡಕ್ ಸೂಚನೆ ನೀಡಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ತಿಳಿಸಿದರು.

ಬಾಲಕಿಯರನ್ನು ಹೊರತುಪಡಿಸಿ ಬಾಲಕರನ್ನು ಶಾಲೆ ಬಿಟ್ಟ ಬಳಿಕ ಸಂಜೆ 4 ರಿಂದ 7ವರೆಗೆ ಶಾಲೆಯಲ್ಲೇ ಇರಿಸಿ ಓದಲು ಶಿಕ್ಷಕರು ನೆರವಾಗಬೇಕು. ಓದಿದ ವಿಷಯವನ್ನು ಬರೆಸುವ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವಂತೆ ನಿರ್ದೇಶನ ನೀಡಲಾಗಿದೆ. ಇದರಿಂದ ತಾಲೂಕಿನಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದಾಗಿದೆ ಎಂದರು. ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿ ಕರೆಗಳನ್ನು ಸ್ವೀಕರಿಸಿ, 250ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ವಿದ್ಯಾರ್ಥಿಗಳಿಂದ ಸಾಮಾನ್ಯವಾಗಿ ಕೇಳಿಬಂದಿರುವ ಪ್ರಶ್ನೆಗಳನ್ನು ಪಟ್ಟಿ ಮಾಡಿ ಅವುಗಳ ಮೇಲೆ ಕೇಂದ್ರೀಕರಿಸಿ ಗೊಂದಲ ನಿವಾರಿಸಬೇಕು. ಜತೆಗೆ ವಿದ್ಯಾರ್ಥಿಗಳ ವಿವರವನ್ನು ದಾಖಲು ಮಾಡಿಕೊಳ್ಳಲಾಗಿದ್ದು, ಆಯಾ ಶಾಲೆಯ ಶಿಕ್ಷಕರು ಅವುಗಳ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಶಿಕ್ಷಕರಿಗೆ ಸುತ್ತೋಲೆ ಹೊರಡಿಸಲಾಗುವುದು ಎಂದು ಹೇಳಿದರು.

ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಅವರು ಫೆ.25ರಂದು ತಾಲೂಕಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ನಗರದ ಕಾರ್ಮೆಲ್ ಶಾಲೆಯ ಸಭಾಂಗಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಾಲೂಕಿನ 65 ಪ್ರೌಢಶಾಲೆಗಳಿಂದ ತಲಾ 5 ವಿದ್ಯಾರ್ಥಿಗಳು ಸೇರಿ ಒಟ್ಟು 325 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಬಿಇಒ ಸಿ.ಎನ್.ರಾಜು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: