ಮೈಸೂರು

ಮೀಸಲಾತಿ ಜಾರಿಗೊಳಿಸಬೇಕೆಂಬುದು ಸೇರಿದಂತೆ ನೂರಾರು ದೂರು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗದ ಮುಂದೆ

ಮೈಸೂರು, ಫೆ.10:-  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಬೇಕು, ಬೇರೆ ರಾಜ್ಯಗಳ ಮಾದರಿ ರಾಜ್ಯದಲ್ಲಿಯೂ ಮೀಸಲಾತಿ ಅನುಷ್ಠಾನ ವಾಗಬೇಕು, ಖಾಸಗಿ ವಲಯದಲ್ಲಿಯೂ ಮೀಸಲಾತಿ ಜಾರಿಗೊಳಿಸಬೇಕೆಂಬುದು ಸೇರಿದಂತೆ ನೂರಾರು ದೂರುಗಳು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗದ ಮುಂದೆ ಬಂದವು.

ನಗರದ ಕಲಾಮಂದಿರದಲ್ಲಿಂದು ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆಯ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ನೇತೃತ್ವದಲ್ಲಿ ನಡೆಯುತ್ತಿರುವ ಮೈಸೂರು ವಿಭಾಗ ಮಟ್ಟದ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿದ ನೂರಾರು ಮಂದಿ ಹಲವಾರು ಸಮಸ್ಯೆಗಳನ್ನು ತೆರೆದಿರಿಸಿದರು.

ಮೈಸೂರು, ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಮಂಡ್ಯ, ಮಡಿಕೇರಿ ಜಿಲ್ಲೆಯಿಂದ ಆಗಮಿಸಿದ ಹಿಂದುಳಿದ ವರ್ಗದ ಹಲವು ಮುಖಂಡರು ಹಾಗೂ ನಾಯಕರು ಹಲವಾರು ಸಮಸ್ಯೆಗಳನ್ನು ತೆರೆದಿಟ್ಟರು.

ಪ್ರಮುಖವಾಗಿ ಮಾಜಿ ಸಂಸದ ಆರ್.ಧ್ರುವನಾರಾಯಣ್ ಮಾತನಾಡಿ, ಇತರ ರಾಜ್ಯಗಳಲ್ಲಿ ಇರುವಂತೆ ನಮ್ಮಲ್ಲೂ ಹಿಂದುಳಿದ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ ಪುಷ್ಪಾ ಅಮರನಾಥ್ ಮಾತನಾಡಿ  ಮೀಸಲಾತಿಯಲ್ಲೇ ಒಳ ಮೀಸಲಾತಿಯಾಗಿ ಪರಗಣಿಸಿ ಮಹಿಳಾ ಮೀಸಲಾತಿ ಕಲ್ಪಿಸಬೇಕೆಂದು ಮನವಿ ಮಾಡಿದರು. ಸದಸ್ಯ ಕಾರ್ಯದರ್ಶಿ ಸಾಬೀರ್ ಅಹಮ್ಮದ್ ಮುಲ್ಲಾ, ವಿಷಯ ತಜ್ಞರಾದ ಬಿ.ರಾಜಶೇಖರ ಮೂರ್ತಿ, ಪ್ರೊ.ಟಿ.ಆರ್.ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಎನ್.ಮುನಿರಾಜು, ಅಮಿತ್ ನಾಯಕ  ಇನ್ನಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: