ಮೈಸೂರು

ಫಲಿತಾಂಶದ ಮುನ್ನಾ ದಿನವೇ ರಸ್ತೆ ಅಪಘಾತದಲ್ಲಿ ಹುಣಸೂರು ನಗರಸಭೆಯ 17ನೇ ವಾರ್ಡ್ ಜೆಡಿಎಸ್ ಅಭ್ಯರ್ಥಿ ಸಾವು

ಮೈಸೂರು,ಫೆ.11:-  ಹುಣಸೂರು ನಗರಸಭೆಯ 17ನೇ ವಾರ್ಡ್ ಜೆಡಿಎಸ್ ಅಭ್ಯರ್ಥಿ ಫಲಿತಾಂಶದ ಮುನ್ನಾ ದಿನವೇ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಮೃತರು ಹುಣಸೂರು ನಗರಸಭೆಯ 17ನೇ ವಾರ್ಡ್ ನಲ್ಲಿ  ಜೆಡಿಎಸ್  ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹೊನ್ನಲಗಯ್ಯ(54) ಎಂಬವರಾಗಿದ್ದಾರೆ.  ಇವರು ಇಂದು ನಡೆಯಲಿರುವ ಮತ ಎಣಿಕೆಯಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ, ಫಲಿತಾಂಶಕ್ಕೂ ಮುನ್ನವೇ ಅವರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.

ಹುಣಸೂರು ನಗರ ಹೊರವಲಯದ ಬಾಚಳ್ಳಿ ರಸ್ತೆಯಲ್ಲಿರುವ ತಮ್ಮ ಜಮೀನಿನಲ್ಲಿದ್ದ ಪತ್ನಿಯನ್ನು ಕರೆತರಲು ಸೋಮವಾರ ಸಂಜೆ ಬೈಕ್‍ನಲ್ಲಿ (ಕೆಎ 09-ಹೆಚ್‍ಜೆ 2910) ತೆರಳುತ್ತಿದ್ದಾಗ ಚಿಕ್ಕಹುಣಸೂರು ಕೆರೆ ಬಳಿನಿಯಂತ್ರಣ ತಪ್ಪಿ ಇವರ ಬೈಕ್ ಚರಂಡಿಗೆ ಬಿದ್ದಿದೆ. ಇದರ ಪರಿಣಾಮ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದ ಹೊನ್ನಲಗಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 17ನೇ ವಾರ್ಡ್‍ನಲ್ಲಿ ಜೆಡಿಎಸ್‍ನಿಂದ ಹೊನ್ನಲಗಯ್ಯ, ಕಾಂಗ್ರೆಸ್‍ನ ಮನು ಮತ್ತು ಪಕ್ಷೇತರರಾಗಿ ಅಭಿಷೇಕ್ ಸ್ಪರ್ಧಿಸಿದ್ದಾರೆ. ಇಂದು ನಡೆಯಲಿರುವ ಮತ ಎಣಿಕೆಯಲ್ಲಿ ಹೊನ್ನಲಗಯ್ಯ ಅವರು ಗೆಲುವು ಸಾಧಿಸಿದರೆ, ಈ ವಾರ್ಡ್‍ನಲ್ಲಿ ಉಪ ಚುನಾವಣೆ ನಡೆಯಲಿದೆ. ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ. ಈ ಸಂಬಂಧ ಹುಣಸೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಂತ್ಯಕ್ರಿಯೆ ಇಂದು ನಡೆಯಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: