ಮೈಸೂರು

ಫೆ.16ರಂದು ನಡೆಯುವ ಅಸಂಖ್ಯ ಪ್ರಮಥ ಗಣಮೇಳಕ್ಕೆ ದಲಿತ ಸಂಘಟನೆಗಳ ಒಕ್ಕೂಟದ ಬೆಂಬಲ

ಮೈಸೂರು,ಫೆ.11:-  ಚಿತ್ರದುರ್ಗದ ಮುರುಘರಾಜೇಂದ್ರ ಬ್ರಹನ್ಮಠದ ಜಗದ್ಗುರು ಡಾ.ಶಿವಮೂರ್ತಿ  ಮಹಾಶರಣರು ಫೆ.16ರಂದು  ಬೆಂಗಳೂರಿನ ತುಮಕೂರು ರಸ್ತೆಯಲ್ಲಿನ ನಂದಿ ಮೈದಾನದಲ್ಲಿ ಹಮ್ಮಿಕೊಂಡಿರುವ ಅಸಂಖ್ಯ ಪ್ರಮಥ ಗಣಮೇಳಕ್ಕೆ ದಲಿತ ಸಂಘಟನೆಗಳ ಒಕ್ಕೂಟದ ಬೆಂಬಲವಿದೆ ಎಂದು ಒಕ್ಕೂಟದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 12ನೇ ಶತಮಾನದಲ್ಲಿ ಬಸವಾದಿ ಶರಣರು ಪ್ರಮಥ ಗಣಮೇಳವೊಂದನ್ನು ಆಯೋಜಿಸಿ ಸಮಾನತೆಯ ಸಂದೇಶವನ್ನು ಸಾರಿದ್ದರು. ಅಂದಿನ ಕ್ಲಯಾಣ ಕ್ರಾಂತಿಯ ಮೂಲಕ ಜಾತಿ ರಹಿತ ಮತ್ತು ವರ್ಗ ರಹಿತ ಸಮಾಜವನ್ನು ನಿರ್ಮಿಸುವ ಉದ್ದೇಶವನ್ನು  ಬಸವಣ್ಣ ಹೊಂದಿದ್ದರು. ಬಸವಣ್ಣನವರ ನಂತರ ಪರಿವರ್ತನೆಯ ಚಿಂತನೆಯ ಮಾರ್ಗದಲ್ಲಿ ಅನೇಕ ಶರಣರು ಮುನ್ನಡೆದರು. ಈ ಅಸಂಖ್ಯ ಪ್ರಮಥ ಗಣಮೇಳದಲ್ಲಿ ಎಲ್ಲಾ ಜಾತಿ ಜನವರ್ಗಗಳು ಭಾಗವಹಿಸಲಿವೆ. ಬುದ್ಧ ಬಸವ, ಅಂಬೇಡ್ಕರ್ ಆಶಯಗಳನ್ನು ಎತ್ತಿ ಹಿಡಿಯುವ ಈ ಗಣಮೇಳದಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಕೂಡ ಭಾಗವಹಿಸಲಿದೆ ಎಂದರು.

ಈ ಸಮ್ಮೇಳನವು ಯಶಸ್ವಿಯಾಗಲು ಒಕ್ಕೂಟದ ದಲಿತ ಸಂಘಟನೆಗಳು ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ಪ್ರಚಾರ ನಡೆಸಿವೆ. ಹಾಗೆಯೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಕ್ಕೂಟದ ಮುಖಂಡರು ಪ್ರವಾಸ ಮಾಡಿ ಸಮ್ಮೇಳನಕ್ಕೆ 30ಸಾವಿರ ದಲಿತರು ಭಾಗವಹಿಸುವಂತೆ ನಿರ್ಧರಿಸಿದ್ದೇವೆ ಎಂದರು.

ರಾಜ್ಯದಲ್ಲಿ ಜಾರಿಯಲ್ಲಿರುವ ಭೂಪರಭಾರ ನಿಷೇಧ ಕಾಯ್ದೆಯಲ್ಲಿನ ಲೋಪಗಳಿಂದ ಇಡೀ ದಲಿತ ಜನಾಂಗಗಳು ಜಮೀನುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಪಿಟಿಸಿಎಲ್ ಕಾಯ್ದೆಗೆ ಸಮಗ್ರ ತಿದ್ದುಪಡಿ ತರಬೇಕೆಂದು ನಮ್ಮ ಒಕ್ಕೂಟವು ಈ ಹಿಂದೆ ಹೋರಾಟ ನಡೆಸಿ ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಯನ್ನು ಮಂಡಿಸಬೇಕೆಂದು ಆಗ್ರಹಿಸಿದ್ದೆವು. ಇದೀಗ ನಮ್ಮ ಒಕ್ಕೂಟವು  ತಿದ್ದುಪಡಿ ಮಸೂದೆಯ ಕರಡನ್ನು ಸಿದ್ಧಗೊಳಿಸಿದ್ದು ಫೆ.14ರಂದು ಸರ್ಕಾರಕ್ಕೆ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ಜಿಲ್ಲಾಧ್ಯಕ್ಷ ವಿ.ಗಣೇಶ್,ಶಿವಮಾಧು, ಎಂ.ಮುರಳಿ, ಸೆಂದಿಲ್ ಕುಮಾರ್, ಈರಯ್ಯ, ಎನ್.ವೆಂಕಟೇಶ್ ಉಪಸ್ಥಿತರಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: