ಪ್ರಮುಖ ಸುದ್ದಿ

ಪಕ್ಷ ವಿರೋಧಿಗಳ ವಿರುದ್ಧ ಕ್ರಮ : ಕೊಡಗು ಜಿಲ್ಲಾ ಕಾಂಗ್ರೆಸ್ ಎಚ್ಚರಿಕೆ

ರಾಜ್ಯ( ಮಡಿಕೇರಿ) ಫೆ.12 :- ಜಿಲ್ಲಾ ಕಾಂಗ್ರೆಸ್‍ನಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರ ಮೇಲೆ ಕಾಂಗ್ರೆಸ್ ವರಿಷ್ಟರು ನಿಗಾ ಇರಿಸಿದ್ದು, ಇದು ಹೀಗೇ ಮುಂದುವರಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಟಿ.ಈ.ಸುರೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ಸಿಗರು ಒಂದೇ ವೇದಿಕೆಯಲ್ಲಿ ಒಗ್ಗಟ್ಟಾಗಿ ಹೋರಾಟ ನಡೆಸುವ ಅನಿವಾರ್ಯತೆ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‍ನೊಳಗೆ ಕೆಲವರು ಪಕ್ಷ ವಿರೋಧಿಗಳಂತೆ ವರ್ತಿಸುತ್ತಿದ್ದು, ಇಂತಹವರಿಗೆ ಪಕ್ಷದಲ್ಲಿರಲು ಅವಕಾಶ ನೀಡುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಒಗ್ಗಟ್ಟಾಗಿ ಮುನ್ನಡೆಯುವ ಉದ್ದೇಶ ಹೊಂದಿದ್ದು, ಇದರ ನಡುವೆಯೇ ಕೆಲವರು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ. ಇವರುಗಳನ್ನು ಪಕ್ಷದ ವರಿಷ್ಟರು ಸೂಕ್ಷ್ಮವಾಗಿ ಪರಿಗಣಿಸುತ್ತಿದ್ದು, ಶಿಸ್ತು ಕ್ರಮ ಖಚಿತವೆಂದರು.
ದಕ್ಷಿಣ ಕೊಡಗಿನಲ್ಲಿ ಕೆಲವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿಕೆ ನೀಡಿದ್ದು, ಇವರು ನಮ್ಮ ಪಕ್ಷದವರೇ ಅಲ್ಲವೆಂದು ಜಿಲ್ಲಾ ಕಾಂಗ್ರೆಸ್ ಪರಿಗಣಿಸಿದೆ ಎಂದರು.
ವಿನಾಶದತ್ತ ಬಿಜೆಪಿ
ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರಗಳು ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಇದರ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ನಡೆಸಲಿದೆ. ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಅವಲೋಕಿಸಿದಾಗ ಬಿಜೆಪಿ ವಿನಾಶದಂಚಿನಲ್ಲಿದೆ ಎಂಬುದು ಖಾತ್ರಿಯಾಗಿದೆಯೆಂದು ಸುರೇಶ್ ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಒಡಕು ಮೂಡಿಸಿ ಧರ್ಮ ಆಧಾರಿತ ರಾಜಕಾರಣ ಮಾಡುತ್ತಿರುವ ಬಿಜೆಪಿ ಸಿದ್ಧಾಂತವನ್ನು ಶೇ.15 ರಷ್ಟು ಮಂದಿ ಮಾತ್ರ ಒಪ್ಪಿಕೊಂಡಿದ್ದು, ದೇಶದ ಶೇ. 85 ರಷ್ಟು ಮಂದಿ ಕಾಂಗ್ರೆಸ್ ಸಿದ್ಧಾಂತದ ಪರವಾಗಿದ್ದಾರೆ ಎಂದು ತಿಳಿಸಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಎಸ್.ಅನಂತ ಕುಮಾರ್ ಮಾತನಾಡಿ, ಎಲ್ಲಾ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರ ಸಂಪರ್ಕ ಸಾಧಿಸುವುದರೊಂದಿಗೆ ಪಕ್ಷದ ಬಲವರ್ಧನೆಗಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಸಧ್ಯದಲ್ಲಿಯೇ ವಲಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಸುವುದಾಗಿ ಹೇಳಿದರು.
ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿ ಅಜ್ಜಳ್ಳಿ ರವಿ ಮಾತನಾಡಿ, ದೇಶದಲ್ಲಿ ಕೇಂದ್ರ ಸರ್ಕಾರದ ಅರ್ಥಹೀನ ಆರ್ಥಿಕ ವ್ಯವಸ್ಥೆಯಿಂದ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೆ ಇದ್ದು, ಕಾರ್ಮಿಕ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಬಿಜೆಪಿ ನೀತಿಯಿಂದ ಬೇಸತ್ತಿರುವ ಕಾರ್ಮಿಕರು ಇಂದಿಗೂ ಕಾಂಗ್ರೆಸ್‍ನೊಂದಿಗೆ ಇದ್ದಾರೆ ಎಂದು ತಿಳಿಸಿದರು.
ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಮಾತನಾಡಿ, ಸಿದ್ದಾಪುರದಲ್ಲಿ ನಡೆಯುತ್ತಿರುವ ಮಳೆಹಾನಿ ಸಂತ್ರಸ್ತರ ಅಹೋ ರಾತ್ರಿ ಧರಣಿ ಮುಷ್ಕರಕ್ಕೆ ಬೆಂಬಲ ಸೂಚಿಸಿದರು. ಸಂತ್ರಸ್ತರಿಗೆ ಶೀಘ್ರ ಮನೆಗಳನ್ನು ನಿರ್ಮಿಸಿಕೊಡಬೇಕು ಮತ್ತು ಬಾಡಿಗೆ ಹಣವನ್ನು ಪಾವತಿಸಬೇಕೆಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಬಾವ ಮಾತನಾಡಿ, ಮುನಿಸಿಕೊಂಡಿರುವ ಪಕ್ಷದ ಹಿರಿಯರು ಹಾಗೂ ಕಾರ್ಯಕರ್ತರ ಮನವೊಲಿಸಿ ಮತ್ತೆ ಕರೆ ತರುವ ಮೂಲಕ ಪಕ್ಷವನ್ನು ಸಶಕ್ತಗೊಳಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರಪೇಟೆ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಾಹಿದ್ ಖಾನ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: