ಮೈಸೂರು

 ವೃದ್ಧೆಯ ಮೇಲೆ ಹಲ್ಲೆ ಮಾಡಿ, ಚಿನ್ನದ ಸರ ದೋಚಿದ್ದವನಿಗೆ 7 ವರ್ಷ ಜೈಲು

ಮೈಸೂರು,ಫೆ.13:-   ವೃದ್ಧೆಯ ಮೇಲೆ ಹಲ್ಲೆ ಮಾಡಿ, ಚಿನ್ನದ ಸರ ದೋಚಿದ್ದವನಿಗೆ ಮೈಸೂರಿನ 2ನೇ ಜಿಲ್ಲಾ ಮತ್ತು ಸೆಷನ್‌ ನ್ಯಾಯಾಲಯ 5 ಸಾವಿರ ರೂ. ದಂಡ ದೊಂದಿಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೋರ್ಪು ನೀಡಿದೆ.

ನಂಜನಗೂಡು ತಾಲೂಕಿನ ತುಮ್ಮನೇರಳೆ ಗ್ರಾಮದ ಟಿ.ಎಂ.ನಾಗೇಂದ್ರ ಶಿಕ್ಷೆಗೆ ಗುರಿಯಾಗಿರುವಾತ. ಈತ  ಮೈಸೂರು ತಾಲೂಕಿನ ಬಂಡಿಪಾಳ್ಯದ ನಿವಾಸಿ ನಂಜಮ್ಮ ಅವರ ಮೇಲೆ   ಹಲ್ಲೆ ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ. 2018ರ ಜನವರಿ 28 ರಂದು ಬೆಳಗ್ಗೆ ನಂಜಮ್ಮ ಅವರು ಹಾಲಿನ ಬೂತ್‌ ಬಾಗಿಲು ತೆರೆಯುತ್ತಿದ್ದಾಗ ಹಿಂದಿನಿಂದ ಬಂದ ನಾಗೇಂದ್ರ, ಏಕಾಏಕಿ ನಂಜಮ್ಮ ಅವರ ತಲೆಗೆ ಆಯುಧದಿಂದ ಹೊಡೆದು ಅವರ ಕತ್ತಿನಲ್ಲಿದ್ದ 35 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ನಂಜಮ್ಮ ಅವರನ್ನು ಸ್ಥಳೀಯ ನಿವಾಸಿಗಳು ಆಸ್ಪತ್ರೆಗೆ ದಾಖಲಿಸಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು  7 ವರ್ಷ ಶಿಕ್ಷೆಯೊಂದಿಗೆ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಎಚ್‌.ಡಿ.ಆನಂದ ಕುಮಾರ್‌ ವಾದ ಮಂಡಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: