ಕ್ರೀಡೆ

ಆರ್‌ಸಿಬಿಯ ಸಾಮಾಜಿಕ ಜಾಲತಾಣದ ಖಾತೆಗಳಿಂದ ಲೊಗೊ, ಪೋಸ್ಟ್ ಕಣ್ಮರೆ

ಬೆಂಗಳೂರು,ಫೆ.13-ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್, ಫೇಸ್ ಬುಕ್ ಹಾಗೂ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಪ್ರೊಫೈಲ್ ಫೋಟೋ, ಕವರ್ ಫೋಟೋ ತೆಗೆದು ಹಾಕಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಲೊಗೊ, ಕವರ್ ಫೋಟೋ ಹಾಗೂ ಪೋಸ್ಟ್‌ಗಳನ್ನು ಡಿಲೀಟ್ ಮಾಡಿರುವ ಆರ್‌ಸಿಬಿ ಫ್ರಾಂಚೈಸಿ ಅಭಿಮಾನಿಗಳಿಗೆ ಶಾಕ್ ನೀಡಿದೆ. ಇದು ಹೆಸರು ಅಥವಾ ಲೊಗೊ ಬದಲಾಯಿಸುವ ತಂತ್ರವೇ ಎಂಬುದು ತಿಳಿದು ಬಂದಿಲ್ಲ.

ಈ ಬಗ್ಗೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ, ಸ್ಟಾರ್ ಆಟಗಾರ ಎಬಿಡಿ ವಿಲಿಯರ್ಸ್, ಕೋಚ್ ಮೈಕ್ ಹೆಸ್ಸನ್, ಬೌಲರ್ ಯುಜ್ವೇಂದ್ರ ಚಹಲ್ ಆತಂಕ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ, ನಾಯಕನಿಗೆ ಮಾಹಿತಿ ನೀಡದೆಯೇ ಪೋಸ್ಟ್‌ಗಳು ಕಣ್ಮರೆಯಾಗಿದೆ ಎಂದು ಕೊರಗಿದ್ದಾರೆ. ಹಾಗೆಯೇ ಏನಾದರೂ ಸಹಾಯ ಬೇಕಾದಲ್ಲಿ ತಿಳಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ಸ್, ‘ಸೋಷಿಯಲ್ ಮೀಡಿಯಾ ಖಾತೆಗಳಿಗೆ ಏನು ಸಂಭವಿಸಿದೆ? ಬಹುಶಃ ಇದೊಂದು ಸ್ಟ್ರಾಟಜಿ ಬ್ರೇಕ್’ ಆಗಿರಬಹದು ಎಂದು ಗೆಲುವಿನ ಸಂಕೇತವನ್ನು ಮಾಡಿದ್ದಾರೆ.

ಕೋಚ್ ಮೈಕ್ ಹೆಸ್ಸನ್‌, ‘ಎಲ್ಲವೂ ಓಕೆ ಎಂದು ಭಾವಿಸುತ್ತೇನೆ. ನಮ್ಮ ಪ್ರೊಫೈಲ್ ಚಿತ್ರಗಳಿಗೆ ಏನು ಸಂಭವಿಸಿದೆ’ ಎಂಬುದು ಚಿಂತೆಗೆ ಕಾರಣವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಆರ್‌ಸಿಬಿ ತಂಡದ ಸ್ಟಾರ್ ಬೌಲರ್ ಯುಜ್ವೇಂದ್ರ ಚಹಲ್, ‘ಏನು ಗೂಗ್ಲಿ ಇದು? ಪ್ರೊಫೈಲ್ ಚಿತ್ರ ಹಾಗೂ ಇನ್‌ಸ್ಟಾಗ್ರಾಂ ಪೋಸ್ಟ್‌ಗಳು ಎಲ್ಲಿ ಹೋಯಿತು’ ಎಂದು ಪ್ರಶ್ನಿಸಿದ್ದಾರೆ.

ಈ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಆರ್‌ಸಿಬಿಯನ್ನು ಕಾಲೆಳೆಯುವ ಪ್ರಯತ್ನಕ್ಕೆ ಮುಂದಾಗಿದೆ. ‘ಹಾಗೊಂದು ವೇಳೆ ಮತ್ತೆ ಬ್ರಾಂಡಿಂಗ್ ಮಾಡುವುದರೆ ಏನಾದರೂ ಸಹಾಯ ಬೇಕಿದ್ದರೆ ಕೇಳಿ. ಒಂದೆರಡು ಅಂಶಗಳು ನಮಗೂ ಗೊತ್ತಿದೆ’ ಎಂದಿದೆ.

ಕಳೆದ ವರ್ಷಾಂತ್ಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗಾಗಿ ನಡೆದ ಹರಾಜು ಪ್ರಕ್ರಿಯೆ ವೇಳೆಯಲ್ಲಿ ತನ್ನ ಅಧಿಕೃತ ಲಾಂಛನದಿಂದ ಬೆಂಗಳೂರು ಹೆಸರನ್ನು ಕೈಬಿಟ್ಟಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿತು. ಆದರೂ ತಮ್ಮ ತಪ್ಪನ್ನು ತಿದ್ದಿಕೊಳ್ಳಲು ಆರ್‌ಸಿಬಿ ಮುಂದಾಗಿರಲಿಲ್ಲ.

ಇದೀಗ ಏಕಾಏಕಿ ಆರ್‌ಸಿಬಿ ಅಧಿಕೃತ ಸಾಮಾಜಿಕ ಖಾತೆಗಳಲ್ಲಿ ಲಾಂಛನ ಹಾಗೂ ಪೋಸ್ಟ್‌ಗಳು ನಾಪತ್ತೆಯಾಗಿದೆ. ಇದರ ಹಿಂದಿನ ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಫ್ರಾಂಚೈಸಿ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ.
ಒಟ್ಟಾರೆಯಾಗಿ ಐಪಿಎಲ್ 2020ನೇ ಆವೃತ್ತಿಗೆ ಕಾಲಿಡುತ್ತಿರುವಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಕಿರೀಟದತ್ತ ಗಮನಹರಿಸಿದೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯಲ್ಲಿ ಕಂಡುಬರಲಿರುವ ಬದಲಾವಣೆಗಳೇನು ಎಂಬುದನ್ನು ಕಾದು ನೋಡಬೇಕಿದೆ. (ಎಂ.ಎನ್)

Leave a Reply

comments

Related Articles

error: