
ಮೈಸೂರು
ಕನ್ನಡಪರ ಸಂಘಟನೆಗಳ ಒಕ್ಕೂಟ ನೀಡಿದ್ದ ಕರ್ನಾಟಕ ಬಂದ್ ಕರೆಗೆ ಮೈಸೂರಿನಲ್ಲಿ ದೊರಕಿಲ್ಲ ಬೆಂಬಲ : ಪ್ರತಿಭಟನೆಗಷ್ಟೇ ಸೀಮಿತ
ಮೈಸೂರು,ಫೆ.13:- ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ನೀಡಿದ್ದ ಕರ್ನಾಟಕ ಬಂದ್ ಕರೆಗೆ ಮೈಸೂರಿನಲ್ಲಿ ಬೆಂಬಲ ದೊರಕದೇ ಪ್ರತಿಭಟನೆಗಷ್ಟೇ ಸೀಮಿತವಾಗಿರುವುದು ಕಂಡು ಬಂತು.
ಕನ್ನಡ ಭಾಷೆ ಉಳಿವಿಗೆ ಹಿಂದಿನಿಂದಲೂ ಹೋರಾಡುತ್ತಿದ್ದು ಈಗಲೂ ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಲು ನೈತಿಕ ಬೆಂಬಲವಿದೆಯೇ ಹೊರತು ಬಂದ್ ಗೆ ಬೆಂಬಲವಿಲ್ಲ ಎಂದಿದ್ದಾರೆ. ಮೈಸೂರಿನ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು. ಕೆಲವು ಕನ್ನಡ ಪರ ಸಂಘಟನೆಗಳು ಅಲ್ಲಲ್ಲಿ ಪ್ರತಿಭಟನೆ ನಡೆಸಿವೆ. ಅದನ್ನು ಬಿಟ್ಟರೆ ಯಾವುದೇ ಬಂದ್ ಇಲ್ಲ. ಮೈಸೂರು ಹೋಟೆಲ್ ಮಾಲೀಕರು ಕೂಡ ನೈತಿಕ ಬೆಂಬಲ ನೀಡಿದ್ದು, ಮೈಸೂರಿನ ಯಾವುದೇ ಹೋಟೆಲ್ಗಳು ಮುಚ್ಚುವುದಿಲ್ಲ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ ಹೇಳಿದರು. ಬಂದ್ಗೆ ನಮ್ಮ ನೈತಿಕ ಬೆಂಬಲವಿದೆ. ಮೈಸೂರು ಪ್ರವಾಸಿಗರ ಸ್ವರ್ಗ. ಪ್ರವಾಸಿಗರಿಗೆ ತೊಂದರೆಯಾಗುವ ಹಿನ್ನೆಲೆ ಹೋಟೆಲ್ ಮುಚ್ಚುವುದಿಲ್ಲ ಎಂದಿದ್ದು, ಹೋಟೆಲ್ ಗಳು ಎಂದಿನಂತೆಯೇ ತೆರೆದಿತ್ತು. ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಬಸ್ಸುಗಳು ನಿರಾತಂಕವಾಗಿ ಓಡಾಡುತ್ತಿವೆ. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿಲ್ಲ. ವಿದ್ಯಾರ್ಥಿಗಳ ಪಾಠ ಪ್ರವಚನಗಳು ನಡೆದಿವೆ. ಚಿತ್ರಮಂದಿರ ಮಾಲೀಕರಿಂದಲೂ ನೈತಿಕ ಬೆಂಬಲವಷ್ಟೇ ಇದ್ದು, ಚಿತ್ರಮಂದಿರಗಳು ಎಂದಿನಂತೆ ನಡೆಯಲಿವೆ.
ಚಿತ್ರಮಂದಿರಗಳನ್ನು ಮುಚ್ಚಲಾಗಿಲ್ಲವೆಂದು ಚಲನಚಿತ್ರ ಮಂದಿರ ಮಾಲೀಕರ ಸಂಘದ ಕಾರ್ಯದರ್ಶಿ ರಾಜಾರಾಂ ಮಾಹಿತಿ ನೀಡಿದರು. ಪ್ರಥಮ ಪಿಯುಸಿ ಪರೀಕ್ಷೆಗೆ ಯಾವುದೇ ಬಂದ್ ಎಫೆಕ್ಟ್ ತಟ್ಟಿಲ್ಲ. ಕನ್ನಡಪರ ಸಂಘಟನೆಗಳಿಂದ ಕರ್ನಾಟಕ ಬಂದ್ಗೆ ಕರೆ ಹಿನ್ನಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೆಂಬಲ ಸಿಗದ ಕಾರಣ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಪರೀಕ್ಷೆ ನಡೆಯುತ್ತಿದ್ದು, ಇಂದು ಇಂಗ್ಲಿಷ್ ಭಾಷಾ ವಿಷಯದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಶಿಕ್ಷಣ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಮೈಸೂರಿನಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಎಂದಿನಂತೆ ವ್ಯಾಪಾರ ವಹಿವಾಟುಗಳು ನಡೆದಿವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಅಲ್ಲಲ್ಲಿ ಚೆಕಿಂಗ್ ನಡೆಸುತ್ತಿದ್ದಾರೆ. ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಮುತ್ತುರಾಜ್, ಬಿ.ಟಿ.ಕವಿತ ನಗರದಲ್ಲಿ ರೌಂಡ್ ಹೊಡೆಯುತ್ತಿದ್ದಾರೆ. ಇನ್ನು ಎಸಿಪಿಗಳು, ಪೊಲೀಸರು ಕೂಡ ತಮ್ಮ ಹದ್ದಿನ ಕಣ್ಣಿರಿಸಿದ್ದಾರೆ. (ಕೆ.ಎಸ್,ಎಸ್.ಎಚ್)