ಕರ್ನಾಟಕಪ್ರಮುಖ ಸುದ್ದಿ

ಹೊಸಪೇಟೆ ಅಪಘಾತ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ: ಆರ್.ಅಶೋಕ್

ಬಳ್ಳಾರಿ,ಫೆ.13-ಹೊಸಪೇಟೆಯಲ್ಲಿ ಅಪಘಾತವಾದ ವಾಹನದಲ್ಲಿ ಸಚಿವ ಆರ್.ಅಶೋಕ್ ಅವರ ಪುತ್ರ ಇರಲಿಲ್ಲ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಕೆ ಬಾಬಾ ಹೇಳಿದ್ದಾರೆ.

ಕಾರಿನಲ್ಲಿ ಸಚಿವರ ಪುತ್ರ ಇದ್ದರು ಎಂಬುದು ವದಂತಿಯಷ್ಟೇ. ಘಟನೆ ನಡೆಯುತ್ತಿದ್ದಂತೆ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಯಾವುದೇ ಕಾರಣಕ್ಕೂ ನಾವು ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಮಾಡಿಲ್ಲ ಎಂದಿದ್ದಾರೆ.

ಅಪಘಾತದಲ್ಲಿ ರವಿನಾಯ್ಕ್ ಎಂಬವರು ಮೃತಪಟ್ಟಿದ್ದರು. ಕಾರಿನಲ್ಲಿದ್ದ ಐವರಲ್ಲಿ ಸಚಿನ್ ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಕಾರು ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಿದ್ದೇವೆ. ಅಪಘಾತ ನಡೆದ ಸ್ಥಳ ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಅತಿಯಾದ ವೇಗ ಅಪಘಾತಕ್ಕೆ ಕಾರಣ ಆಗಿರಬಹುದು ಎಂದು ಹೇಳಿದ್ದಾರೆ.

ಕಾರು ಯಾರಿಗೆ ಸೇರಿದ್ದು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. (ಲಭ್ಯ ಇರುವ ಮಾಹಿತಿಗಳ ಪ್ರಕಾರ ಕಾರು ‘ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌’ ಹೆಸರಿನಲ್ಲಿ ನೋಂದಣಿಯಾಗಿದೆ.) ಸಿಸಿಟಿವಿ ಫೂಟೇಜ್ ಪರಿಶೀಲನೆ ಮಾಡುತ್ತೇವೆ. ಘಟನೆಗೆ ಕಾರಣ ಏನು ಅಂತ ತನಿಖೆ ನಡೆಸಲಾಗುತ್ತಿದೆ. ಬೆಂಗಳೂರಿಗೆ ನಮ್ಮ ತಂಡ ತೆರಳಿ ಗಾಯಾಳುಗಳ ಹೇಳಿಕೆ ಪಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಕರಣದ ಬಗ್ಗೆ ಮಾತನಾಡಿರುವ ಸಚಿವ ಆರ್.ಅಶೋಕ್, ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಪುತ್ರನ ಮೇಲಿನ ಆರೋಪವನ್ನು ನಿರಾಕರಿಸಿದರೂ ಘಟನೆ ನಡೆದ ಸಂದರ್ಭದಲ್ಲಿ ಪುತ್ರ ಎಲ್ಲಿದ್ದ ಎಂಬ ಪ್ರಶ್ನೆಗೆ ಉತ್ತರ ನೀಡಲಿಲ್ಲ.

ಈ ಘಟನೆ ದುರಾದೃಷ್ಟಕರ. ಘಟನೆಯಿಂದ ನೋವಾಗಿದೆ. ಆದರೆ ಕೆಲವು ಮಾಧ್ಯಮಗಳಲ್ಲಿ ತನ್ನ ಪುತ್ರ ಇದ್ದ ಎಂಬುವುದನ್ನು ಉಲ್ಲೇಖಿಸಲಾಗಿದೆ. ಆದರೆ ಇದರಲ್ಲಿ ನಮ್ಮ ಪಾತ್ರ ಯಾವುದೇ ರೀತಿಯಲ್ಲೂ ಇಲ್ಲ. ಪೊಲೀಸರು ತನಿಖೆ ನಡೆಸಿ ಸೂಕ್ತ ಕ್ರಮವನ್ನು ಕೈಗೊಳ್ಳುತ್ತಾರೆ ಎಂದರು.

ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಅಪಘಾತ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಬಾರದು. ಪ್ರಭಾವಿ ವ್ಯಕ್ತಿಯನ್ನು ರಕ್ಷಿಸಲು ಸರ್ಕಾರ ಪ್ರಯತ್ನಿಸಬಾರದು. ಸತ್ಯ ಮತ್ತು ನ್ಯಾಯ ಗೆಲ್ಲಲಿ ಎಂದು ಟ್ವೀಟ್ ಮಾಡಿದೆ. (ಎಂ.ಎನ್)

 

Leave a Reply

comments

Related Articles

error: