ದೇಶಪ್ರಮುಖ ಸುದ್ದಿ

ಪುಲ್ವಾಮ ದಾಳಿ ಕರಾಳ ದಿನಕ್ಕೆ ಒಂದು ವರ್ಷ: ಹುತಾತ್ಮ ಯೋಧರನ್ನು ಸ್ಮರಿಸಿದ ದೇಶ

ನವದೆಹಲಿ,ಫೆ.14-ಪುಲ್ವಾಮ ದಾಳಿ ಕರಾಳ ದಿನಕ್ಕೆ ಇಂದಿಗೆ ಒಂದು ವರ್ಷ. ಉಗ್ರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರನ್ನು ಗಣ್ಯ ವ್ಯಕ್ತಿಗಳು ಹಾಗೂ ಇಡೀ ದೇಶವೇ ಸ್ಮರಿಸಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕರು ಹುತಾತ್ಮ ಯೋಧರನ್ನು ಸ್ಮರಿಸಿದ್ದಾರೆ.

ಹುತಾತ್ಮರಾದ ಯೋಧರ ಸ್ಮರಣಾರ್ಥ ಸ್ಮಾರಕ ಸ್ತಂಭ ಸಮರ್ಪಣೆ ಮೂಲಕ ಕೇಂದ್ರ ಮೀಸಲು ಪೊಲೀಸ್ ಪಡೆ ಗೌರವ ಸಲ್ಲಿಸಲಿದೆ. ಪುಲ್ವಾಮದ ಲೆಟ್ ಪೋರಾ ಎಂಬಲ್ಲಿರುವ ಸಿಆರ್ ಪಿ ಎಫ್ ತರಬೇತಿ ಕೇಂದ್ರದಲ್ಲಿ ಇಂದು ನಡೆಯುವ ಸಮಾರಂಭದಲ್ಲಿ ಸಿಆರ್ ಪಿ ಎಫ್ ವಿಶೇಷ ಮಹಾ ನಿರ್ದೇಶಕ ಜೂಲ್ಫಿಕರ್ ಹಸನ್, ಕಾಶ್ಮೀರ ವಲಯದ ಪೊಲೀಸ್ ಮಹಾ ನಿರ್ದೇಶಕ ರಾಜೇಶ್ ಕುಮಾರ್ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಈ ಸ್ತಂಭದ ಮೇಲೆ `ಸೇವೆ ಮತ್ತು ನಿಷ್ಟೆ’ ಎಂಬ ಧ್ಯೇಯದೊಂದಿಗೆ ಹುತಾತ್ಮ ಯೋಧರ ಹೆಸರುಗಳನ್ನು ಬರೆಯಲಾಗಿದೆ. ಇದೇ ಸಮಾರಂಭದಲ್ಲಿ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿದೆ ಎಂದು ಜೂಲ್ಫಿಕರ್ ಹಸನ್ ತಿಳಿಸಿದ್ದಾರೆ.

ರಾಮನಾಥ್ ಕೋವಿಂದ್, ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ನಮ್ಮ ಕೆಚ್ಚೆದೆಯ ಸೈನಿಕರ ತ್ಯಾಗಕ್ಕೆ ರಾಷ್ಟ್ರವು ನಮಸ್ಕರಿಸುತ್ತದೆ. ಜೊತೆಗೆ ಕೃತಜ್ಞರಾಗಿತ್ತದೆ. ಭಯೋತ್ಪಾದನೆಯನ್ನು ಎಲ್ಲಾ ರೀತಿಯಲ್ಲೂ ನಿರ್ಮೂಲನೆ ಮಾಡುವ ನಮ್ಮ ಸಂಕಲ್ಪದಲ್ಲಿ ನಾವು ದೃಢವಾಗಿರುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ, ಕಳೆದ ವರ್ಷ ನಡೆದ ಭೀಕರ ಪುಲ್ವಾಮಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಧೈರ್ಯಶಾಲಿ ಹುತಾತ್ಮರಿಗೆ ಗೌರವ. ಅವರು ನಮ್ಮ ರಾಷ್ಟ್ರದ ಸೇವೆ ಮತ್ತು ರಕ್ಷಣೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಸಾಧಾರಣ ವ್ಯಕ್ತಿಗಳು. ಅವರ ಹುತಾತ್ಮತೆಯನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ರಾಜನಾಥ್ ಸಿಂಗ್, ಪುಲ್ವಾಮಾದಲ್ಲಿ ನಡೆದ ಭೀಕರ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್ ಪಿಎಫ್ ವೀರ ಯೋಧರನ್ನು ನೆನೆಯುತ್ತಿದ್ದೇವೆ. ವೀರ ಯೋಧರ ತ್ಯಾಗ, ಬಲಿದಾನವನ್ನು ಭಾರತ ಎಂದಿಗೂ ಮರೆಯುವುದಿಲ್ಲ. ಭಯೋತ್ಪಾದನೆ ವಿರುದ್ಧ ಇಡೀ ದೇಶ ಒಗ್ಗೂಡಿಸಿದೆ. ಭಯೋತ್ಪಾದನೆ ಎಂಬ ಪಿಡುಗಿನ ವಿರುದ್ಧ ಪ್ರತಿಯೊಬ್ಬರೂ ಹೋರಾಟ ಮಾಡಲು ಬದ್ಧರಾಗಿದ್ದಾರೆಂದು ಹೇಳಿದ್ದಾರೆ.

ಅಮಿತ್ ಶಾ ಅವರು, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುತ್ತೇನೆ. ವೀರ ಯೋಧರ ಬಲಿದಾನ, ಅವರ ಕುಟುಂಬದ ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದ್ದಾರೆ.

2019ರ ಫೆಬ್ರವರಿ 14 ರಂದು ಭದ್ರತಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಾಹನದ ಮೇಲೆ ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರ ಆದಿಲ್ ಅಹ್ಮದ್ ದಾರ್ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದ. ಭೀಕರ ದಾಳಿಯಲ್ಲಿ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು.

ಪುಲ್ವಾಮಾ ಜಿಲ್ಲೆಯ ಲೆಥ್ಪೊರ ಪ್ರದೇಶದ ಅವಂತಿಪೊರ್ ಬಳಿ ಮಹಿಂದ್ರಾ ಸ್ಕಾರ್ಪಿಯೋ  ವಾಹನದಲ್ಲಿ 350 ಕೆ.ಜಿ. ಸ್ಫೋಟಕವನ್ನು ತುಂಬಿದ್ದ ಜೀಪನ್ನು ಸಿಆರ್‌ಪಿಎಫ್‌ ವಾಹನಕ್ಕೆ ಗುದ್ದುವ ಮೂಲಕ ಸ್ಫೋಟ ನಡೆಸಲಾಗಿತ್ತು. 76ನೇ ಬೆಟಾಲಿಯನ್ ಯೋಧರ ಸೇವಾ ವಿಭಾಗ ದಾಳಿಗೆ ತುತ್ತಾಗಿತ್ತು. ಘಟನೆ ವೇಳೆ ಒಟ್ಟು 70 ಆರ್ಮಿ ಟ್ರಕ್ ಗಳಲ್ಲಿ 2500 ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದರು.

ವಾಹನ ಸ್ಫೋಟದ ಬಳಿಕ ಉಗ್ರರು ಭದ್ರತಾ ಪಡೆಯ ಮೇಲೆ ಗುಂಡು ಮತ್ತು ಗ್ರನೇಡ್‌ ದಾಳಿಯನ್ನೂ ನಡೆಸಿದ್ದರು. ಸ್ಫೊಟದ ಬೆನ್ನಲ್ಲೇ ಗುಂಡಿನ ಮೊರೆತ ಮತ್ತು ಗ್ರನೇಡ್‌ ಸ್ಫೋಟದ ಸದ್ದು ಕೇಳಿಸಿತು ಎಂದು ಪೊಲೀಸರು ಹೇಳಿದ್ದರು.

ಈ ಭೀಕರ ಘಟನೆ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತವು ಫೆಬ್ರವರಿ 26 ರಂದು ಪಾಕ್ ಆಕ್ರಮಿತ ಕಾಶ್ಮೀರ ಭಾಗದ ಬಾಲಾಕೋಟ್ ಪ್ರದೇಶದಲ್ಲಿದ್ದ ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಪರಿಣಾಮ ಅಪಾರ ಸಂಖ್ಯೆಯಲ್ಲಿ ಜೈಶ್ ಜೈಷ್-ಎ-ಮೊಹಮ್ಮದ್ ಸಂಘಟನೆಯ 300ಕ್ಕೂ ಹೆಚ್ಚು ಉಗ್ರಗಾಮಿಗಳು ಸತ್ತಿದ್ದಾರೆ ಎಂದು ಭಾರತ ಹೇಳಿತ್ತು. ಆದರೆ, ಪಾಕಿಸ್ತಾನ ಮಾತ್ರ ಬಾಲಾಕೋಟ್ ದಾಳಿಯಲ್ಲಿ ಯಾರೊಬ್ಬರು ಮೃತಪಟ್ಟಿಲ್ಲ ಎಂದು ವಾದಿಸಿತ್ತು. (ಎಂ.ಎನ್)

Leave a Reply

comments

Related Articles

error: