ಮನರಂಜನೆಮೈಸೂರು

ಸಾಮಾಜಿಕ ಜಾಗೃತಿ ಮೂಡಿಸುವಂತಹ ಹಾಗೂ ಮಾನವೀಯ ಮೌಲ್ಯವನ್ನು ವೃದ್ಧಿಸುವ ಚಲನಚಿತ್ರಗಳು ಬೆಳ್ಳಿ ಪರದೆಯ ಮೇಲೆ ಮೂಡಿಬರಬೇಕು : ‘ಓಜಸ್’ ಚಿತ್ರದ ನಾಯಕ ನಟ ಸುಶ್ರುತ್ ಮೋಹನ್

ಮೈಸೂರು,ಫೆ.14:- ಸಮಾಜದ ಪ್ರಸ್ತುತ ಸನ್ನಿವೇಶದಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವಂತಹ ಹಾಗೂ ಮಾನವೀಯ ಮೌಲ್ಯವನ್ನು ವೃದ್ಧಿಸುವ ಚಲನಚಿತ್ರಗಳು ಬೆಳ್ಳಿ ಪರದೆಯ ಮೇಲೆ ಮೂಡಿಬರಬೇಕು ಎಂದು ‘ಓಜಸ್’ ಚಿತ್ರದ ನಾಯಕ ನಟ ಸುಶ್ರುತ್ ಮೋಹನ್ ಹೇಳಿದರು.

ರಾಜ್ಯಾದ್ಯಂತ ‘ಓಜಸ್’ ಚಿತ್ರ ತೆರೆಕಂಡು ಪ್ರದರ್ಶನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಿ.ನರಸೀಪುರ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಯಾವುದೇ ಚಲನಚಿತ್ರ ಮನರಂಜನೆಯ ಜೊತೆಗೆ ಸಾಮಾಜಿಕ ಅರಿವು ಹಾಗೂ ಬದುಕಿನ ಮೌಲ್ಯವನ್ನು ತಿಳಿಸುವಂತೆ ಮೂಡಿ ಬರಬೇಕು. ಈ ದಿಸೆಯಲ್ಲಿ ನನ್ನ ಮೊದಲ ಚಿತ್ರ ‘ಓಜಸ್’ ನಲ್ಲಿ ಸಮಾಜದ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಲಾಗಿದೆ ಎಂದರು.

ಚಿತ್ರದ ನಿರ್ದೇಶಕರು ಚೊಚ್ಚಲ ಚಿತ್ರದಲ್ಲಿಯೇ ಐಪಿಎಸ್ ಅಧಿಕಾರಿ ಪಾತ್ರದಲ್ಲಿ ನಟಿಸುವ ಅವಕಾಶವನ್ನು ಕಲ್ಪಿಸಿದ್ದರು. ಸಾಮಾಜಿಕ ವ್ಯವಸ್ಥೆಯಲ್ಲಿ ಅಡಗಿಕೊಂಡಿರುವ ತೊಡಕುಗಳು, ಜೂಜು, ಕುಡಿತ ಹಾಗೂ ಇನ್ನಿತರ ಕೆಟ್ಟ ಚಟಗಳನ್ನು ತೊಲಗಿಸಲಿಕ್ಕೆ ಹೋರಾಡುವ ಅಧಿಕಾರಿ ಪ್ರೀತಿಯ ನಡುವೆ ಸಿಲುಕಿಕೊಂಡು ತ್ಯಾಗಕ್ಕೆ ಸಿದ್ಧನಾಗುವ ಕಥಾ ಹಂದರವಾಗಿದೆ ಎಂದು ಚಿತ್ರ ಕಥೆಯ ಕುರಿತು ಹಂಚಿಕೊಂಡರು.

ಕಲೆ, ಸಾಹಿತ್ಯ ಸೇರಿದಂತೆ ಧಾರ್ಮಿಕ ಹಾಗೂ ಐತಿಹಾಸಿಕ ಹಿನ್ನೆಲೆಯಿರುವ ತಿರುಮಕೂಡಲು ನರಸೀಪುರ ತಾಲೂಕಿನ ಹುಡುಗನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದೇನೆ. ಬೆಳ್ಳಿ ಪರದೆಯ ಮೇಲೂ ಕಾಣಿಸಿಕೊಂಡಿದ್ದೇನೆ. ಜನರ ಆಶೀರ್ವಾದದಿಂದ ಉತ್ತಮ ಸಂದೇಶವನ್ನು ಸಾರುವ ಚಿತ್ರಗಳಲ್ಲಿ ಅವಕಾಶ ಸಿಕ್ಕರೆ ನಟಿಸುತ್ತೇನೆ ಎಂದು ನುಡಿದರು.

ಉದ್ಯಮದ ಮೇಲೂ ಆಸಕ್ತಿಯಿದೆ

ಚಿತ್ರರಂಗದಷ್ಟೇ ತಾಲೂಕಿನಲ್ಲಿರುವ ಮದ್ಯಮ ಉದ್ಯಮದ ಮೇಲೂ ತುಂಬಾ ಆಸಕ್ತಿಯಿದ್ದು, ರೈತರ ಕೃಷಿ ಕಸುಬಿಗೆ ಪೂರಕವಾಗಿರುವ ಅಣಬೆ ಆಧಾರಿತ ಮಶ್ರೂಮ್ ಕಾರ್ಖಾನೆಯನ್ನು ಈಗಾಗಲೇ ಆರಂಭಿಸಿದ್ದೇನೆ. ತಾಲೂಕಿನ ಜನರ ಜೊತೆಯಲ್ಲಿಯೂ ನಿರಂತರವಾಗಿ ಸಂಪರ್ಕದಲ್ಲಿ ಇರುತ್ತೇನೆ ಎಂದು ಸುಶ್ರುತ್ ಮೋಹನ್ ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: