ಕರ್ನಾಟಕಕ್ರೀಡೆಪ್ರಮುಖ ಸುದ್ದಿ

ಹೊಸ ಲೋಗೋ ಬಿಡುಗಡೆ ಮಾಡಿದ ಆರ್‌ಸಿಬಿ

ಬೆಂಗಳೂರು,ಫೆ.14-ಕಳೆದ ಎರಡು ದಿನಗಳಿಂದ ಭಾರೀ ಸುದ್ದಿಯಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೂತನ ಲೋಗೋ, ನೂತನ ಫ್ಲಾಗ್​ನೊಂದಿಗೆ ಕಮ್​ಬ್ಯಾಕ್ ಮಾಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬಿಡುಗಡೆ ಮಾಡಿರುವ ಹೊಸ ಲಾಂಛನವು ಕೆಂಪು ಹಿನ್ನೆಲೆ, ಗೋಲ್ಡನ್ ಲಯನ್ ಮತ್ತು ಕಪ್ಪು ಬಣ್ಣದಲ್ಲಿ ತಂಡದ ಹೆಸರನ್ನು ಹೊಂದಿದೆ.

ಜೊತೆಗೆ `ಹೆಸರಲ್ಲೂ ನೀವೆ,
ಉಸಿರಲ್ಲೂ ನೀವೆ,

ಎಲ್ಲೆಲ್ಲೂ ನೀವೆ ಸ್ಫೂರ್ತಿ

ಸೋಲಲ್ಲೂ ನೀವೆ,
ಗೆಲುವಲ್ಲೂ ನೀವೆ,
ಎಂದೆಂದೂ ನೀವೆ ಸಾಥಿ

ನಮ್ಮ ನಿನ್ನೆಗಳು ನೀವೆ,
ನಾಳೆಗಳು ನೀವೆ,
ಎಲ್ಲವೂ ನಿಮ್ಮ ಪ್ರೀತಿ” ಎಂದು ಟ್ವೀಟ್ ಮಾಡಿದೆ.

ಆರ್‌ಸಿಬಿ ಲೋಗೋ ನೋಡಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನಮ್ಮ ತಂಡ ನಮ್ಮ ಹೆಮ್ಮೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಟ್ವೀಟ್ ಮಾಡಿದ್ದಾರೆ.

ಈ ಮಧ್ಯೆ ಕನ್ನಡ ಪ್ರೇಮವನ್ನು ತೋರಿಸುವ ಭರದಲ್ಲಿ ಭಾರಿ ಎಡವಟ್ಟು ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕವನದಲ್ಲಿ ಕನ್ನಡದ ಕಗ್ಗೊಲೆಯಾಗಿದೆ. ಬಹುತೇಕ ಪ್ರತಿಯೊಂದು ಪದದಲ್ಲಿ ಅಕ್ಷರ ದೋಷಗಳು ಕಂಡುಬಂದಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಆರ್‌ಸಿಬಿ ಈ ಬಾರಿ ಹಲವು ಬದಲಾವಣೆಯೊಂದಿಗೆ ಹೊಸ ಹುರುಪಿನಿಂದ ಕಣಕ್ಕಿಳಿಯುತ್ತಿದೆ.

ಎರಡು ದಿನಗಳ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ಲಾಂಛನ ಹಾಗೂ ಪೋಸ್ಟ್‌ಗಳನ್ನು ಡಿಲೀಟ್ ಮಾಡಿರುವುದು ವ್ಯಾಪಕ ಗೊಂದಲಕ್ಕೆ ಕಾರಣವಾಗಿತ್ತು. ಈ ವಿಚಾರ ಆರ್​ಸಿಬಿ ಯಾವೊಬ್ಬ ಪ್ಲೇಯರ್​ಗೂ ತಿಳಿಸಿರಲಿಲ್ಲ. ನಾಯಕ ವಿರಾಟ್ ಕೊಹ್ಲಿ, ಕೋಚ್ ಮೈಕ್ ಹೆಸ್ಸನ್, ಸ್ಟಾರ್ ಆಟಗಾರರಾದ ಎಬಿ ಡಿ ವಿಲಿಯರ್ಸ್ ಹಾಗೂ ಯುಜ್ವೇಂದ್ರ ಚಹಲ್ ಟ್ವೀಟ್ ಮಾಡಿ ಆತಂಕವನ್ನು ವ್ಯಕ್ತಪಡಿಸಿದ್ದರು.

ಕೊನೆಗೂ ಸ್ಪಷ್ಟನೆಯೊಂದಿಗೆ ಮುಂದೆ ಬಂದಿರುವ ಆರ್‌ಸಿಬಿ ಪ್ರೇಮಿಗಳ ದಿನಾಚರಣೆಯಂದು ಹೊಸ ಲೊಗೊ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಇದಕ್ಕೆ ಸಂಬಂಧ ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿತ್ತು.

ಈ ಹಿಂದೆ ಆರ್​ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬೆಂಗಳೂರು ಎಂಬ ಹೆಸರನ್ನು ಕಿತ್ತುಹಾಕಿ ಕೇವಲ ರಾಯಲ್ ಚಾಲೆಂಜರ್ಸ್​ ಎಂದು ಬರೆದುಕೊಂಡಿತ್ತು. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಆರ್​ಸಿಬಿ ವಿರುದ್ಧ ಕಿಡಿ ಕಾರಿದ್ದರು. ಕಿಂಗ್ ಕೊಹ್ಲಿ 7 ಬಾರಿ ನಾಯಕನಾಗಿ ಆರ್ ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೂ ಒಮ್ಮೆಯೂ ಕಪ್ ಗೆಲ್ಲಲು ಯಶಸ್ವಿಯಾಗಿಲ್ಲ. ಈ ಬಾರಿಯಾದರೂ ಕಪ್ ಗೆಲ್ಲುತ್ತಾರಾ ಕಾದು ನೋಡಬೇಕಿದೆ. (ಎಂ.ಎನ್)

Leave a Reply

comments

Related Articles

error: