ಮೈಸೂರು

ರಂಗಾಯಣದಿಂದ ಹಸಿರು ದಸರಾ ರಂಗೋತ್ಸವ: ಭೂಮಿಗೀತದಲ್ಲಿ ನಾಟಕ ಪ್ರದರ್ಶನ

ಯುವ ಜನರಲ್ಲಿ ಪ್ರಕೃತಿ ಪ್ರೇಮದ ಮನೋಭಾವ ಬೆಳೆಸುವ ಉದ್ದೇಶದಿಂದ  ಪ್ರಕೃತಿ ಸಂರಕ್ಷಣೆಯ ಸಂದೇಶದಡಿ ರಂಗಾಯಣ ಈ ಬಾರಿ ಹಸಿರು ದಸರಾ ರಂಗೋತ್ಸವ ಹಾಗೂ ಬಿ.ವಿ.ಕಾರಂತ ಕಾಲೇಜು ರಂಗೋತ್ಸವ ನಡೆಸಲು ಉದ್ದೇಶಿಸಿದೆ.

ನೀರಿನ ಸಮಸ್ಯೆ ಜನರನ್ನು ಕಾಡುತ್ತಿದೆ ಅದು ಬಗೆಹರಿಯಬೇಕು, ಉತ್ತಮ ಮಳೆ-ಬೆಳೆಯಾಗಬೇಕಾದರೆ ನಾವೆಲ್ಲರೂ ಐಕ್ಯತಾ ಭಾವನೆಯಿಂದ   ಪ್ರಕೃತಿ ಸಂರಕ್ಷಣೆಯಲ್ಲಿ ತೊಡಗಬೇಕು. ಭಾವೈಕ್ಯದೊಂದಿಗೆ ಸಮಾಜ ಸದೃಢಗೊಳಿಸಬೇಕೆಂಬ ಆಶಯದಿಂದ ರಂಗಾಯಣದ ಕಾಲೇಜು ವಿದ್ಯಾರ್ಥಿಗಳಿಂದಲೇ ಸಿದ್ಧಗೊಳಿಸಿದ ನಾಟಕಗಳು ರಂಗಾಯಣದ ಭೂಮಿಗೀತ ರಂಗಮಂಚದ ಮೇಲೆ ಮೂಡಿ ಬರಲಿದೆ ಎಂದು ರಂಗಾಯಣ ನಿರ್ದೇಶಕ ಎಚ್.ಜನಾರ್ದನ್ ತಿಳಿಸಿದರು.

ರಂಗಾಯಣದ ಲಂಕೇಶ್ ಆರ್ಟ್ ಗ್ಯಾಲರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾಟಕೋತ್ಸವಕ್ಕೆ ಸಚಿವ ಎಚ್.ಎಸ್.ಮಹದೇವಪ್ರಸಾದ್ ಚಾಲನೆ ನೀಡಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಸಾಧಕರನ್ನು ಸನ್ಮಾನಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ್ ಉಪಸ್ಥಿತರಿರಲಿದ್ದು, ಶಾಸಕ ವಾಸು ಅಧ್ಯಕ್ಷತೆವಹಿಸಲಿದ್ದಾರೆ ಎಂದು ತಿಳಿಸಿದರು. ಸೆಪ್ಟೆಂಬರ್ 28ರಿಂದ ಅಕ್ಟೋಬರ್ 10ರವರೆಗೆ ಭೂಮಿಗೀತದಲ್ಲಿ ನಡೆಯುವ ಬಿ.ವಿಕಾರಂತ ಕಾಲೇಜು ರಂಗೋತ್ಸವದಲ್ಲಿ ಒಟ್ಟು 13ನಾಟಕಗಳು ಪ್ರದರ್ಶನಗೊಳ್ಳಲಿವೆ. ಮಂಡ್ಯ, ಹುಣಸೂರು, ತಿ.ನರಸೀಪುರ ಸೇರಿದಂತೆ 11ಕಾಲೇಜುಗಳ ಸುಮಾರು 500 ಯುವ ಕಲಾವಿದರು ಪಾಲ್ಗೊಳ್ಳಲಿದ್ದಾರೆ.

ಸೆಪ್ಟೆಂಬರ್ 28ರಂದು ಸಂಜೆ 5.30ಕ್ಕೆ ಬಿದಿರಂಗ ವೇದಿಕೆಯಲ್ಲಿ ಶೂನ್ಯ ತಂಡದಿಂದ ಐಕ್ಯತೆ ಸೃಜನಶೀಲ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಪ್ರತಿದಿನ ಸಂಜೆ 6.30ಕ್ಕೆ ಎರಡು ನಾಟಕ ಪ್ರದರ್ಶನಗೊಳ್ಳಲಿದೆ. ಪ್ರತಿದಿನವೂ ಓರ್ವ ಸಾಧಕರನ್ನು  ಸನ್ಮಾನಿಸಲಾಗುತ್ತದೆ ಎಂದರು. ಅಜ್ಞಾತ ಕನಸುಗಳು, ಸ್ತ್ರೀ ಎಂದರೆ ಅಷ್ಟೇ ಸಾಕೇ?, ಗೆಜ್ಜಲಟ್ಟಿ, ಮಹಾಮಾಯಿ, ಧನ್ವಂತ್ರಿಯ ಚಿಕಿತ್ಸೆ, ಕುರುಡು ಕಾಂಚಾಣ, ಬೆಂದಕಾಳು ಆನ್ ಟೋಸ್ಟ್, ಗೊಂಬೆ ರಾವಣ, ಗಿರಿಜಾ ಕಲ್ಯಾಣ, ಕಳ್ಳರ ಸಂತೆ, ಬಿಟ್ಟ ಪಯಣವ ಬಿಡದೆ, ಸೇವಂತಿ ಪ್ರಸಂಗ, ಕತ್ತಲೆ ಬೆಳಕು ನಾಟಕಗಳು ಪ್ರದರ್ಶನಗೊಳ್ಳಲಿದ್ದು, ಉಚಿತ ಪ್ರವೇಶವಿರುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ರಂಗೋತ್ಸವ ಸಂಚಾಲಕ ವಿನಾಯಕ ಭಟ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Tags

Related Articles

error: