ದೇಶ

ಹಾರ್ದಿಕ್ ಪಟೇಲ್ 20 ದಿನಗಳಿಂದ ನಾಪತ್ತೆ: ಹುಡುಕಿಕೊಡುವಂತೆ ಮನವಿ ಮಾಡಿದ ಪತ್ನಿ

ಅಹಮದಾಬಾದ್,ಫೆ.14- ಕಾಂಗ್ರೆಸ್ ಮುಖಂಡ ಮತ್ತು ಪಾಟಿದಾರ್ ಕೋಟಾ ಆಂದೋನಲದ ಮುಂಚೂಣಿ ನಾಯಕ ಹಾರ್ದಿಕ್ ಪಟೇಲ್ ಕಳೆದ 20 ದಿನಗಳಿಂದ ನಾಪತ್ತೆಯಾಗಿದ್ದಾರೆ.

ಪಟೇಲ್ ಪತ್ನಿ ಕಿಂಜಲ್ ಪತಿ ಕಾಣೆಯಾಗಲು ಗುಜರಾತ್ ಆಡಳಿತ ಮಂಡಳಿಯೇ ಕಾರಣ ಎಂದು ದೂರಿದ್ದಾರೆ. ಜೊತೆಗೆ ಪತಿಯನ್ನು ಹುಡುಕಿಕೊಡಿ ಎಂದು ಗೋಳಾಡಿದ್ದಾರೆ.

ಕಳೆದ 20 ದಿನಗಳಿಂದ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ವಿಡಿಯೋ ಒಂದನ್ನು ಕಿಂಜಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಗುಜರಾತ್ ಸರ್ಕಾರಕ್ಕೆ ಹಾರ್ದಿಕ್ ಪಟೇಲ್ ಜನರ ಬಳಿ ಹೋಗುವುದು, ಅವರ ಬಳಿ ಮಾತನಾಡುವುದು, ಅವರ ಬಗ್ಗೆ ಧ್ವನಿ ಎತ್ತುವುದನ್ನು ಸಹಿಸಲು ಆಗುತ್ತಿಲ್ಲ. ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಗುಜರಾತ್ ಸರ್ಕಾರವು ಹಾರ್ದಿಕ್ ಅವರನ್ನು ಬಂಧಿಸಲು ಮುಂದಾಗಿತ್ತು ಎಂದು ಆರೋಪಿಸಿರುವ ಅವರು, 2015ರ ದೇಶದ್ರೋಹ ಪ್ರಕರಣದಲ್ಲಿ 2020ರ ಜನವರಿ 18ರಂದು ಹಾರ್ದಿಕ್ ಪಟೇಲ್ ಅವರನ್ನು ಬಂಧಿಸಲಾಗಿದ್ದು ಆ ನಂತರ ಅವರು ಎಲ್ಲಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದಿದ್ದಾರೆ.

2015ರ ಪಾಟಿದಾರ್ ಕೋಟಾ ಆಂದೋಲನದ ವೇಳೆ ಹಾರ್ದಿಕ್ ಪಟೇಲ್ ದೇಶದ್ರೋಹದ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಜನವರಿ 18ರಂದು ಬಂಧಿಸಲಾಗಿತ್ತು. ಇನ್ನು ಇಲ್ಲಿಯ ನ್ಯಾಯಾಲಯವು ವಿಚಾರಣೆಯ ಸಮಯದಲ್ಲಿ ಹಾಜರಾಗದ ಕಾರಣ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ನಾಲ್ಕು ದಿನಗಳ ನಂತರ ಹಾರ್ದಿಕ್ ಪಟೇಲ್ ಗೆ ಜಾಮೀನು ನೀಡಲಾಯಿತು. ಇದಾದ ಬೆನ್ನಲ್ಲೇ ಪಠಾನ್ ಮತ್ತು ಗಾಂಧಿನಗರ ಜಿಲ್ಲೆಗಳಲ್ಲಿ ದಾಖಲಾದ ಇತರ ಎರಡು ಪ್ರಕರಣಗಳ ಸಂಬಂಧ ಮತ್ತೆ ಅವರನ್ನು ಪೊಲೀಸರು ಬಂಧಿಸಿದ್ದರು. ಜನವರಿ 24ರಂದು ಈ ಎರಡು ಪ್ರಕರಣಗಳ ಸಂಬಂಧ ಜಾಮೀನು ಸಿಕ್ಕಿತ್ತು.

ನಂತರ ವಿಚಾರಣೆಗೆ ಹಾಜರಾಗದ ಕಾರಣ ವಿಚಾರಣಾ ನ್ಯಾಯಾಲಯ ಫೆಬ್ರವರಿ 7ರಂದು ಮತ್ತೆ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿತ್ತು. ಇನ್ನು ಪೊಲೀಸರು ಮನೆಯ ಹತ್ತಿರ ಬಂದು ಹಾರ್ದಿಕ್ ಪಟೇಲ್ ಎಲ್ಲಿದ್ದಾನೆ ಎಂದು ನಮ್ಮನ್ನೆ ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ. 2015ರ ಪಾಟಿದಾರ್ ಕೋಟಾ ಆಂದೋಲನದ ರೂವಾರಿಯಾಗಿದ್ದ ಪಟೇಲ್ ವಿರುದ್ಧ 20 ಪ್ರಕರಣಗಳು ದಾಖಲಾಗಿವೆ. (ಎಂ.ಎನ್)

Leave a Reply

comments

Related Articles

error: