ಮನರಂಜನೆ

ಪ್ರೇಮಿಗಳ ದಿನದಂದು ನಟ ವಿಜಯ್ ಸೂರ್ಯಗೆ ಪತ್ನಿಯಿಂದ ಸ್ಪೆಷಲ್ ಉಡುಗೊರೆ

ಬೆಂಗಳೂರು,ಫೆ.14-ಪ್ರೇಮಿಗಳ ದಿನಾಚರಣೆ ಅಂಗವಾಗಿ ಕಿರುತೆರೆ ನಟ ವಿಜಯ್ ಸೂರ್ಯ ಅವರಿಗೆ ಪತ್ನಿ ಚೈತ್ರಾ ಸ್ಪೆಷಲ್ ಉಡುಗೊರೆ ನೀಡಿದ್ದಾರೆ.

ವಿಜಯ್ ಸೂರ್ಯ ಅವರಿಗೆ ಇಂದು ಡಬಲ್ ಧಮಾಕಾ. ಇಂದು ಪ್ರೇಮಿಗಳ ದಿನಾಚರಣೆ ಜೊತೆಗೆ ವಿಜಯ್ ಸೂರ್ಯ ಹಾಗೂ ಚೈತ್ರ ಅವರಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ಸಂತೋಷದೊಂದಿಗೆ ಮತ್ತೊಂದು ಖುಷಿ ಅವರ ಬಾಳಿಗೆ ಆಗಮನವಾಗಿದೆ. ಹೌದು, ನಟ ವಿಜಯ್ ಸೂರ್ಯ ಗಂಡು ಮಗುವಿನ ತಂದೆಯಾಗಿದ್ದಾರೆ.

ಜನವರಿ 1 ರಂದು ಮಗು ಜನನವಾಗಿದ್ದು, ಆ ಸುದ್ದಿಯನ್ನು ಪ್ರೇಮಿಗಳ ದಿನದ ಪ್ರಯುಕ್ತ ಇಂದು ಅಧಿಕೃತವಾಗಿ ಅಭಿಮಾನಿಗಳ ಮುಂದಿಟ್ಟಿದ್ದಾರೆ. ಮಗುವಿಗೆ ಸೋಹನ್ ಸೂರ್ಯ ಎಂದು ಹೆಸರಿಡಲಾಗಿದೆ.

ಈ ಬಗ್ಗೆ ಸಂತಸವನ್ನು ಹಂಚಿಕೊಂಡಿರುವ ವಿಜಯ್ ಸೂರ್ಯ, ಪ್ರೇಮಿಗಳ ದಿನ ನಿಜಕ್ಕೂ ನನಗೆ ತುಂಬ ಸ್ಪೆಷಲ್. ಇದೇ ದಿನ ನಾನು ಮದುವೆಯಾಗಿದ್ದೆ. ಅದರ ಜೊತೆಗೆ ನಾನು ತಂದೆಯಾಗಿದ್ದೇನೆ. ಚೈತ್ರಾ ನನಗೆ ಮಗನನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ನನಗೆ ಅವರು ನೀಡಿದ ದೊಡ್ಡ ಉಡುಗೊರೆ. ತುಂಬ ಸಮಯದ ನಂತರ ನಮ್ಮ ಕುಟುಂಬಕ್ಕೆ ಪುಟಾಣಿ ಕಂದನ ಆಗಮನವಾಗಿರೋದಿಕ್ಕೆ ಎಲ್ಲರೂ ಫುಲ್ ಸಂಭ್ರಮದಲ್ಲಿದ್ದಾರೆ ಎಂದಿದ್ದಾರೆ.

ಕಳೆದ ವರ್ಷ ಇದೇ ದಿನದಂದು ನಟ ವಿಜಯ್ ಸೂರ್ಯ ಅವರು ಚೈತ್ರಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಚೈತ್ರಾ ಸಾಫ್ಟ್‌ವೇರ್ ಉದ್ಯೋಗಿ.

ವಿಜಯ್ ಸೂರ್ಯ ಸದ್ಯಕ್ಕೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ `ಪ್ರೇಮಲೋಕ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯದಲ್ಲೇ ಅವರು ಮುಂದಿನ ಸಿನಿಮಾ ಬಗ್ಗೆ ಅಧಿಕೃತವಾಗಿ ಮಾತನಾಡಲಿದ್ದಾರೆ. (ಎಂ.ಎನ್)

Leave a Reply

comments

Related Articles

error: