ಪ್ರಮುಖ ಸುದ್ದಿಮೈಸೂರು

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಕಟ್ಟಡ ನಿರ್ಮಾಣ ಸ್ಥಳ ಪರಿಶೀಲನೆ ನಡೆಸಿದ ಸಚಿವ ಸಿ.ಟಿ.ರವಿ : ಬಾಲಗ್ರಹ ಪೀಡಿತವಾಗಿದ್ದ ಯೋಜನೆಗೆ ಸರ್ಕಾರದ ಆರ್ಥಿಕ ನೆರವು

ಮೈಸೂರು,ಫೆ.16:- ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಕಟ್ಟಡ ನಿರ್ಮಿಸಲು 3 ಎಕರೆ ಜಾಗವನ್ನು ಮೈಸೂರು ವಿಶ್ವವಿದ್ಯಾನಿಲಯ ಆವರಣದಲ್ಲಿ ಮಾನಸಗಂಗೋತ್ರಿಯ ಕೇಂದ್ರೀಯ ಭಾಷಾ ಸಂಸ್ಥಾನದ ನಿರ್ದೇಶಕರಿಗೆ ಗುತ್ತಿಗೆ ಆಧಾರದ ಮೇಲೆ ನೀಡಿದ್ದು, ಇಂದು ಬೆಳಿಗ್ಗೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಸಿ.ಟಿ.ರವಿ ಅವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಭಾರತೀಯ ಭಾಷಾ ಅಧ್ಯಯನ ಸಂಸ್ಥೆಯನ್ನು ಮೈಸೂರಿನಲ್ಲಿ ಸ್ಥಾಪಿಸಲು ಅಂತಿಮ ನಿರ್ಧಾರ ಮಾಡಲಾಗಿದ್ದು, ಕನ್ನಡ ಶಾಸ್ತ್ರೀಯ ಸ್ಥಾನಮಾನಕ್ಕೆ ಹಚ್ಚು ಒತ್ತು ನೀಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಹಕಾರ ನೀಡಿದೆ ಎಂದರು.‌ ಕಳೆದ ಏಳು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆ ಗೆ ಚಾಲನೆ ದೊರಕಿದ್ದು, ಬಾಲಗ್ರಹ ಪೀಡಿತವಾಗಿದ್ದ ಈ ಯೋಜನೆ ರಾಜ್ಯ ಸರ್ಕಾರ ಅರ್ಥಿಕ ನೆರವು ನೀಡಿದೆ. ಕೇಂದ್ರ ಸರ್ಕಾರದ  ಹೆಚ್ಚಿನ ಅನುದಾನದ ನಿರೀಕ್ಷೆ ಇದೆ. ಸ್ಥಳೀಯ ನಾಯಕರಾಗಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನವರು ಈ ಯೋಜನೆಗೆ ಆಸಕ್ತಿ ತೋರಿಲ್ಲ ಎಂದು ಆರೋಪಿಸಿದ ಅವರು ದೂರದ ಊರಿನವನಾದ ನಾನು ಆಸಕ್ತಿ ವಹಿಸಿದ್ದರಿಂದ ಈ ಯೋಜನೆಗೆ ಚುರುಕು ಬಂದಿದೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಮಾತನಾಡಿ ರಾಜ್ಯ ಸರ್ಕಾರ ದಾಪುಗಾಲನ್ನಿಟ್ಟಿದೆ. ನೆನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳನ್ನು ಈ ರೀತಿ ಮುಂಚೂಣಿಗೆ ತಂದು ಸಮಸ್ಯೆಗೆ ಬೇಕಾದ ಪರಿಹಾರವನ್ನು ಹುಡುಕಿ ಸದ್ಯದಲ್ಲೇ ಆರಂಭವಾಗುವ ಹಾಗೆ ಮಾಡಬೇಕೆಂಬ ಇಚ್ಛಾಶಕ್ತಿಯಿಂದ ಕೆಲಸ ಮಾಡುತ್ತಿದೆ ಎಂದರು.

ಮಾತೃ ಸಂಸ್ಥೆಯ ಜೊತೆಯಲ್ಲಿ ಎಂಹೆಚ್ ಆರ್ ಡಿಯ ಸಹಾಯದೊಂದಿಗೆ ನಮ್ಮ ಕನ್ನಡ ಭಾಷೆ ಶಾಶ್ವತವಾಗಿ ಉಳಿಯುವ ಒಂದು ಕೆಲಸವನ್ನು ಇಲ್ಲಿ ಹಮ್ಮಿಕೊಂಡಿದೆ. ಶಾಸ್ತ್ರೀಯ ಸ್ಥಾನಮಾನ ಅದು ಕೇವಲ ಬೋರ್ಡ್ ಅಲ್ಲ. ಅದರ ಹಿಂದೆ ಇರುವ ಮನೋಧರ್ಮ ಬಹಳ ಮುಖ್ಯ. ಸಾಹಿತ್ಯ, ಸಂಸ್ಕೃತಿ ಇವೆಲ್ಲಕ್ಕು ಹೆಚ್ಚಿನ ಒತ್ತು ಕೊಡುವ ಮೈಸೂರಿನಲ್ಲಿ ಆಗುತ್ತಿರುವುದು ಒಂದು ರೀತಿಯಲ್ಲಿ ಒಳ್ಳೆಯದೇ ಅಗಿದೆ. ಅದರ ಮೂಲಕ ಇಡೀ ಸಾಹಿತ್ಯಿಕ, ಸಾಂಸ್ಕೃತಿಕ ಜಗತ್ತೊಂದನ್ನು ಕನ್ನಡ ಭಾಷೆಯ ಶಾಸ್ತ್ರೀಯ ಸ್ಥಾನಮಾನದ ಜೊತೆ ಜೊತೆಯಲ್ಲಿ ಕೊಂಡೊಯ್ಯುವ ಬದ್ಧತೆಯೊಂದನ್ನು ಈ ಸಂಸ್ಥೆ ಮಾಡಲಿದೆ ಎಂದು ತಿಳಿಸಿದರು.

ಮುಂದೆ ಒಂದು ಮಾದರಿಯಾಗಿ ಇಡೀ ಭಾರತದಲ್ಲಿ ಹಲವು ಭಾಷೆಗಳಿಗೆ ಮಾದರಿಯಾಗಿ ನಿಲ್ಲುವಂತಹ ಕೆಲಸ ಮಾಡಬೇಕು ಎನ್ನುವುದು ಕರ್ನಾಟಕ ಸರ್ಕಾರದ ಆಶಯ. ಮುಖ್ಯಮಂತ್ರಿಗಳು, ಸಚಿವರು ಎಲ್ಲ ರೀತಿಯ ಸಹಕಾರ ನೀಡುತ್ತಾರೆ. ಎಲ್ಲ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ , ಕುಲಸಚಿವ ಪ್ರೊ.ಆರ್.ಶಿವಪ್ಪ ಮತ್ತಿತರರು ಸ್ಥಳದಲ್ಲಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: