ಮೈಸೂರು

ಎಸ್.ಸಿ/ಎಸ್.ಟಿ/ಒಬಿಸಿ ವರ್ಗದ ಮೀಸಲಾತಿ ಮುಂಬಡ್ತಿ ಹಕ್ಕನ್ನು ಮೊಟಕುಗೊಳಿಸಿರುವುದರ ವಿರುದ್ಧ,ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಫೆ.15:- ಎಸ್.ಸಿ/ಎಸ್.ಟಿ/ಒಬಿಸಿ ವರ್ಗದ ಮೀಸಲಾತಿ ಮುಂಬಡ್ತಿ ಹಕ್ಕನ್ನು ಮೊಟಕುಗೊಳಿಸಿರುವುದರ ವಿರುದ್ಧ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಪ್ರತಿಭಟನೆ ನಡೆಯಿತು.

ಮೈಸೂರಿನ ಗಾಂಧಿ ಚೌಕದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಪ.ಜಾತಿ/ಪ.ಪಂಗಡದ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ಕುರಿತು ಸರ್ವೋಚ್ಛ ನ್ಯಾಯಾಲಯದ ವ್ಯಾಖ್ಯಾನದ ಮರುಪರಿಶೀಲನೆಗೆ ಕೇಂದ್ರ ಸರ್ಕಾರವನ್ನು  ಒತ್ತಾಯಿಸಿದರು. ಉತ್ರಾಖಂಡ ರಾಜ್ಯಕ್ಕೆ ಸಂಬಂಧಿಸಿದ ಸಿವಿಲ್ ಅಪೀಲ್ ಮೊಕದ್ದಮೆಯಲ್ಲಿ ಸರ್ವೋಚ್ಛ ನ್ಯಾಯಾಲಯವು 7/2/2020ರಂದು ತೀರ್ಪು ನೀಡಿದೆ. ನ್ಯಾಯಾಧೀಶರಾದ ಎಲ್.ನಾಗೇಶ್ವರರಾವ್ ಮತ್ತು ಹೇಮಂತ್ ಗುಪ್ತ ಈ ತೀರ್ಪನ್ನು ನೀಡಿದ್ದಾರೆ. ಉತ್ತರಾಖಂಡ ರಾಜ್ಯವು ಪ.ಜಾತಿ, ಪ.ಪಂಗಡದವರಿಗೆ ಭಡ್ತಿಯಲ್ಲಿ ಒದಗಿಸಿಕೊಡಬೇಕಾಗಿದ್ದ ಮೀಸಲಾತಿಗೆ ಸಂಬಂಧಿಸಿದಂತೆ ಉತ್ತರಾಖಂಡದ ುಚ್ಛ ನ್ಯಾಯಾಲಯವು ತೀರ್ಪು ನೀಡಿತ್ತು. ಈ ವಿಷಯವಾಗಿ ಸಿವಿಲ್ ಮೇಲ್ಮನವಿ ಮೊಕದ್ದಮೆಯಲ್ಲಿ ಸರ್ವೋಚ್ಛ ನ್ಯಾಯಾಲಯವು ತೀರ್ಪು ನೀಡಿದೆ. ತೀರ್ಪು ನೀಡುವಾಗ ಪ.ಜಾತಿ ಮತ್ತು ಪ.ಪಂಗಡದವರಿಗೆ ಸರ್ಕಾರದ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವುದು ರಾಜ್ಯದ ವಿವೇಚನೆಗೆ ಬಿಟ್ಟಿದೆ ಎಂದು ಹೇಳಿದೆ. ಮೀಸಲಾತಿಯು ಮೂಲಭೂತ ಹಕ್ಕಲ್ಲ ಎಂಬ ವ್ಯಾಖ್ಯಾನವನ್ನು ನೀಡಿದೆ. ಇದು ಅಪಾಯಕಾರಿ ವ್ಯಾಖ್ಯಾನವಾಗಿದೆ. ಅಸಾಂವಿಧಾನಿಕವಾಗಿದೆ. ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗಗಳ ವಿರುದ್ಧವಾಗಿದೆ ಎಂದು ಆರೋಪಿಸಿದರು.

ಸಂಘ ಪರಿವಾರ ಮತ್ತು ಭಾರತೀಯ ಜನತಾ ಪಕ್ಷವು ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ. ದೆಹಲಿಯಲ್ಲಿ ಸಂತ ರವಿದಾಸರ ದೇವಸ್ಥಾನವನ್ನು ಕೆಡವಿ ಹಾಕಿದರು. ಪ.ಜಾತಿ/ಪ.ಪಂಗಡದ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಿದರು. ಕಾಂಗ್ರೆಸ್ ಪಕ್ಷವು ಸಂಸತ್ ನಲ್ಲಿ ಹೋರಾಟ ಮಾಡಿದ ನಂತರ ದೌರ್ಜನ್ಯ ತಡೆ ಕಾಯ್ದೆಯನ್ನು ಬಲಪಡಿಸಲಾಯಿತು. ಕೇಂದ್ರ ಸರ್ಕಾರವು ಪ.ಜಾತಿ ಹಿಂಬಾಕಿ ಹುದ್ದೆಗಳನ್ನು ತುಂಬುತ್ತಿಲ್ಲ. ಪ.ಜಾತಿ ಮತ್ತು ಪ.ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು 2014ರಿಂದಲೂ ಪರಿಷ್ಕರಣೆ ಮಾಡಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದಲಿತ ವಿರೋಧಿಯಾಗಿದೆ ಎಂದು ಕಿಡಿ ಕಾರಿದರು.

ಶತಶತಮಾನಗಳಿಂದ ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ತುಳಿತಕ್ಕೊಳಗಾಗಿರುವ ಶೋಷಿತ ವರ್ಗಗಳಿಗೆ ಪೂರಕವಾಗಿ ಸಂವಿಧಾನದಲ್ಲಿ ಮೀಸಲಾತಿಗೆ ಅವಕಾಶ ನೀಡಲಾಗಿದೆ. ಸಮಾಜದಲ್ಲಿ ಎಲ್ಲಿಯವರೆಗೆ ಅಸಮಾನತೆ ಇರುವುದೋ ಅಲ್ಲಿಯವರೆಗೆ ಮೀಸಲಾತಿ ಇರಬೇಕು ಎಂದು ಒತ್ತಾಯಿಸಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಹಿಂದುತ್ವದ ಅಜೆಂಡಾ ಮತ್ತದರ ರಹಸ್ಯ ಕಾರ್ಯಸೂಚಿಗಳ ಮಾರ್ಗದಲ್ಲಿ ಸರ್ಕಾರದ ಬಹುತೇಕ ಸಂಸ್ಥೆಗಳು ಕೆಲಸ ಮಾಡುತ್ತಿವೆ ಎಂಬ ಅನುಮಾನಗಳಿವೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ತಾವು ಸಂವಿಧಾನದ ಪರ ಎಂಬುದನ್ನು ನಿರೂಪಿಸಲು ಉಚ್ಛ ನ್ಯಾಯಾಲಯದಲ್ಲಿ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ನಗರಾದ್ಯಕ್ಷ ಆರ್.ಮೂರ್ತಿ, ಮಾಜಿ ಸಂಸದ ಆರ್.ಧೃವನಾರಾಯಣ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮೈಲ್ಯಾಕ್ ಮಾಜಿ ಅಧ್ಯಕ್ಷ ವೆಂಕಟೇಶ್, ಕಾಂಗ್ರೆಸ್ ಕಾರ್ಯಕರ್ತರು  ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: