ಮನರಂಜನೆ

ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿ ನಡೆಸಿದ ನಟಿ ರವೀನಾ ಟಂಡನ್

ಬೆಂಗಳೂರು,ಫೆ.15-ರಾಕಿಂಗ್ ಸ್ಟಾರ್ ಯಶ್ ಅಭಿನಯದ `ಕೆಜಿಎಫ್‌-2’ ಚಿತ್ರದ ಚಿತ್ರೀಕರಣಕ್ಕಾಗಿ ಮೈಸೂರಿಗೆ ಆಗಮಿಸಿದ್ದ ಬಾಲಿವುಡ್ ನಟಿ ರವೀನಾ ಟಂಡನ್ ಇದೀಗ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ಕೊಟ್ಟಿದ್ದ ರವೀನಾ ಟಂಡನ್ ಉದ್ಯಾನದ ಕಬಿನಿ ಹಿನ್ನೀರು ಸಮೀಪದ ದೊಮ್ಮನಕಟ್ಟೆ ವ್ಯಾಪ್ತಿ ಅರಣ್ಯ ಪ್ರದೇಶದಲ್ಲಿ ಸಫಾರಿ ನಡೆಸಿ ಕಾಡಿನಲ್ಲಿ ವನ್ಯಪ್ರಾಣಿಗಳು ಹಾಗೂ ಪರಿಸರ ಸೌಂದರ್ಯವನ್ನು ವೀಕ್ಷಿಸಿ ಆಕರ್ಷಿತರಾದರು.

ಚಿತ್ರೀಕರಣ ಮುಗಿದ ಬಳಿಕ ಎರಡು ದಿನಗಳ ಕಾಲ ಕಾಡಿನಲ್ಲಿ ಸಫಾರಿ ನಡೆಸಿ ಖುಷಿಪಟ್ಟಿದ್ದಾರೆ. ರವೀನಾ ಟಂಡನ್ ತಮ್ಮ ಸ್ನೇಹಿತರೊಂದಿಗೆ ಎಚ್‌.ಡಿ.ಕೋಟೆ ತಾಲೂಕಿನ ಕಾರಾಪುರ ಬಳಿ ಇರುವ ಜೆಎಲ್‌ಆರ್‌ನಲ್ಲಿ ಕಳೆದ ಎರಡು ದಿನಗಳಿಂದ ವಾಸ್ತವ್ಯ ಹೂಡಿದ್ದರು. ವಿಶ್ರಾಂತಿ ಪಡೆದು ಕಬಿನಿ ಹಿನ್ನೀರು ಪ್ರದೇಶದ ಅರಣ್ಯದಲ್ಲಿ ಸಫಾರಿ ಮಾಡಿದರು. ಅಲ್ಲದೆ, ಕಾಡಿನಲ್ಲಿ ಸಸಿ ಸಹ ನೆಟ್ಟಿದ್ದಾರೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ಕೊಟ್ಟ ಸಂತೋಷವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ರವೀನಾ ಟಂಡನ್‌ ಅವರಿಗೆ ಮೊದಲ ದಿನವೇ ಹುಲಿಯ ದರ್ಶನವಾಗಿದೆ. ಬಳಿಕ ಆನೆ, ಜಿಂಕೆ, ಚಿರತೆ ಸೇರಿದಂತೆ ಹಲವು ವನ್ಯಪ್ರಾಣಿಗಳ ದರ್ಶನವಾಗಿದೆ. ಸಫಾರಿಗೆ ಬಂದಿದ್ದ ಪ್ರವಾಸಿಗರು ಮುಗಿಬಿದ್ದು ರವೀನಾ ಟಂಡನ್ ಅವರೊಂದಿಗೆ ಫೋಟೊ ತೆಗೆಸಿಕೊಂಡರು. ರವೀನಾ ಟಂಡನ್‌ ಚಿತ್ರೀಕರಣ ಹಾಗೂ ಸಫಾರಿ ಮುಗಿಸಿ ಬೆಂಗಳೂರಿಗೆ ತೆರಳಿದ್ದಾರೆ. (ಎಂ.ಎನ್)

Leave a Reply

comments

Related Articles

error: