
ಕ್ರೀಡೆಪ್ರಮುಖ ಸುದ್ದಿ
5ನೇ ಹೆಣ್ಣು ಮಗುವಿಗೆ ತಂದೆಯಾದ ಪಾಕ್ ಕ್ರಿಕೆಟಿಗ ಶಾಹೀದ್ ಆಫ್ರಿದಿ
ನವದೆಹಲಿ,ಫೆ.15-ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಆಫ್ರಿದಿ ಐದನೇ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಪ್ರೇಮಿಗಳ ದಿನದಂದು ಅಂದರೆ ನಿನ್ನೆ ಶಾಹೀದ್ ಆಫ್ರಿದಿ ಪತ್ನಿ ನಾದಿಯಾ ಆಫ್ರಿದಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಸಂತಸದ ವಿಷಯವನ್ನು ಸ್ವತಃ ಶಾಹೀದ್ ಆಫ್ರಿದಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಶಾಹೀದ್ ಆಫ್ರಿದಿಗೆ ಅಕ್ಸಾ, ಅನ್ಷಾ, ಅಜ್ವಾ ಮತ್ತು ಅಸ್ಮಾರಾ ಎಂಬ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ಇದೀಗ ಜನಿಸಿರುವ ಹೆಣ್ಣು ಮಗುವಿಗೆ ಏನು ನಾಮಕರಣ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.
ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸಲು ವಿಶ್ವಸಂಸ್ಥೆ ವ್ಯಾಪಕ ಕ್ರಮ ಕೈಗೊಳ್ಳುತ್ತಿರುವ ಮಧ್ಯೆ ಪಾಕಿಸ್ತಾನದಲ್ಲಿ ಹೆಚ್ಚು ಜನಪ್ರಿಯತೆ ಸಾಧಿಸಿರುವ ಕ್ರಿಕೆಟಿಗನೊಬ್ಬ ಐದನೇ ಹೆಣ್ಣು ಮಗುವಿಗೆ ಅಪ್ಪನಾಗಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ನೆಟ್ಟಿಗರು ನಾನಾ ರೀತಿ ಟ್ರೋಲ್ ಮಾಡಿದ್ದಾರೆ.
ಅದರಲ್ಲೊಬ್ಬ ಶಾಹೀದ್ ಆಫ್ರಿದಿ ಗಂಡು ಮಗುವನ್ನು ಬಯಸುತ್ತಿದ್ದು, ಗಂಡು ಮಗು ಜನಿಸುವವರೆಗೂ ಈ ಪ್ರಕ್ರಿಯೆ ನಿಲ್ಲಿಸಲ್ಲ ಎಂದು ಕಿಡಿಕಾರಿದ್ದಾರೆ. ಈ ಪ್ರಕ್ರಿಯೆಯಲ್ಲಿ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡವನ್ನು ರಚಿಸಲಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.
ಹಿಂದೊಮ್ಮೆ ತಮ್ಮ ಹೆಣ್ಣು ಮಕ್ಕಳಿಗೆ ಹೊರಂಗಣ ಮೈದಾನದಲ್ಲಿ ಆಡಲು ಅನುವು ಮಾಡಿಕೊಡುವುದಿಲ್ಲ. ಏನೇ ಇದ್ದರೂ ಒಳಾಂಗಣ ಕ್ರೀಡಾಂಗಣದಲ್ಲಿ ಆಡಬೇಕು ಎಂಬ ಶಾಹೀದ್ ಆಫ್ರಿದಿ ನಿಯಂತ್ರಣ ಹೇರಿರುವುದು ಕೆಂಗಣ್ಣಿಗೆ ಗುರಿಯಾಗಿಸಿತ್ತು.
ಜೊತೆಗೆ ಮಗಳು ಭಾರತೀಯ ಸಂಪ್ರದಾಯದಂತೆ ಆರತಿ ಮಾಡುತ್ತಿರುವುದನ್ನು ಗಮನಿಸಿದ ಶಾಹೀದ್ ಆಫ್ರಿದಿ ಟಿವಿಯನ್ನೇ ಒಡೆದು ಹಾಕಿದ್ದೆ ಎಂದು ಹೇಳಿಕೊಂಡಿದ್ದರು. ಇದು ಭಾರತದಲ್ಲೂ ವ್ಯಾಪಕ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿತ್ತು. (ಎಂ.ಎನ್)