ಕ್ರೀಡೆಪ್ರಮುಖ ಸುದ್ದಿ

ಕಂಬಳ ಓಟಗಾರ ಶ್ರೀನಿವಾಸ ಗೌಡರನ್ನು ಕೋಚ್ ಬಳಿಗೆ ಆಹ್ವಾನಿಸಿದ ಕಿರಣ್ ರಿಜಿಜು

ನವದೆಹಲಿ,ಫೆ.15- ಉಸೇನ್‌ ಬೋಲ್ಟ್‌ ಗಿಂತ ವೇಗವಾಗಿ ಕಂಬಳದ ಗದ್ದೆಯಲ್ಲಿ ಓಡಿದ್ದ ಶ್ರೀನಿವಾಸ ಗೌಡ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದರು.

ಸುದ್ದಿ ಕೊನೆಗೂ ಕೇಂದ್ರ ಕ್ರೀಡಾ ಸಚಿವರನ್ನು ತಲುಪಿದ್ದು, ಶ್ರೀನಿವಾಸಗೌಡನನ್ನು ಭೇಟಿಯಾಗುವುದಾಗಿ ಸಚಿವರು ತಿಳಿಸಿದ್ದಾರೆ.

ಹಲವರು ಶ್ರೀನಿವಾಸ ಗೌಡ ಅವರಿಗೆ ತರಬೇತಿ ನೀಡಿ ಕ್ರೀಡಾಕೂಟದಲ್ಲಿ ಅವರನ್ನು ಓಡಿಸುವಂತೆ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರರಿಗೆ ಮನವಿ ಮಾಡಿಕೊಂಡಿದ್ದರು. ಇದಕ್ಕೀಗ ಕಿರಣ್‌ ರಿಜಿಜು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

 

ಸಚಿವ ಕಿರಣ್‌ ರಿಜಿಜು, ಭಾರತೀಯ ಕ್ರೀಡಾ ಪ್ರಾಧಿಕಾರದ ಉನ್ನತ ತರಬೇತುದಾರರ ಬಳಿಗೆ ಟ್ರಯಲ್ಸ್‌ಗೆ ನಾನು ಕರ್ನಾಟಕದ ಶ್ರೀನಿವಾಸ ಗೌಡರನ್ನು ಆಹ್ವಾನಿಸುತ್ತೇನೆ. ಒಲಿಂಪಿಕ್ಸ್‌ನ ಮಾನದಂಡಗಳ ಬಗ್ಗೆ ಜನಸಾಮಾನ್ಯರಲ್ಲಿ ಜ್ಞಾನದ ಕೊರತೆಯಿದೆ. ವಿಶೇಷವಾಗಿ ಅಥ್ಲೆಟಿಕ್ಸ್‌ನಲ್ಲಿ ಮಾನವನ ಸಾಮರ್ಥ್ಯ ಮತ್ತು ಶಕ್ತಿಯ ಅಂತಿಮಘಟ್ಟವನ್ನು ಮೀರಿಸಲಾಗುತ್ತದೆ. ಭಾರತದಲ್ಲಿ ಯಾವುದೇ ಪ್ರತಿಭೆಗಳನ್ನು ಪರೀಕ್ಷಿಸದೆ ಬಿಡುವುದಿಲ್ಲ ಎಂಬುದನ್ನು ನಾನು ಖಾತರಿಪಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಉದ್ಯಮಿ ಆನಂದ್‌ ಮಹೀಂದ್ರಾ, ಒಮ್ಮೆ ಅವರ ಮೈಕಟ್ಟನ್ನು ನೋಡಿ. ಈ ಮನುಷ್ಯ ಅಸಾಧಾರಣ ಅಥ್ಲೆಟಿಕ್ ಸಾಹಸಗಳನ್ನು ಮಾಡಲು ಸಮರ್ಥನೆಂದು ನಿಮಗೆ ತಿಳಿದಿದೆ. ಈಗ ಅವರಿಗೆ ಕಿರಣ್ ರಿಜಿಜು 100 ಮೀ ಓಟಗಾರನ ತರಬೇತಿ ನೀಡಬೇಕು ಅಥವಾ ನಾವು ಕಂಬಳವನ್ನು ಒಲಂಪಿಕ್ಸ್‌ಗೆ ಸೇರ್ಪಡೆಗೊಳಿಸಬೇಕು. ಯಾವುದೇ ರೀತಿಯಲ್ಲಿ, ಶ್ರೀನಿವಾಸ ಅವರಿಗೆ ಚಿನ್ನದ ಪದಕ ಬೇಕು! ಎಂದು ಟ್ಟೀಟ್‌ ಮಾಡಿದ್ದರು.

ಫೆ.1ರಂದು ಮಂಗಳೂರು ಸಮೀಪದ ಐಕಳ ಎಂಬಲ್ಲಿ ನಡೆದ ಕಂಬಳ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಮೂಡಬಿದಿರೆ ಮೀಯಾರಿನ ಶ್ರೀನಿವಾಸಗೌಡ ಅವರು 142.50 ಮೀಟರ್‌ ಉದ್ದದ ಕಂಬಳದ ಗದ್ದೆಯಲ್ಲಿ ಕೇವಲ 13.62 ಸೆಕೆಂಡುಗಳಲ್ಲಿ ಕೋಣಗಳನ್ನು ಓಡಿಸಿಕೊಂಡು ಗುರಿ ತಲುಪಿದ್ದರು. ಇದನ್ನು 100 ಮೀಟರ್‌ ಇಳಿಸಿದರೆ ತಗುಲುವ ಸೆಕೆಂಡುಗಳು ಕೇವಲ 9.55! ಅಂದರೆ ಉಸೇನ್‌ ಬೋಲ್ಟ್‌ ನಿರ್ಮಿಸಿದ ದಾಖಲೆಗಿಂತ 0.3 ಸೆಕೆಂಡ್‌ ಕಡಿಮೆ ಅವಧಿಯಲ್ಲೇ ತಲುಪಿದ್ದರು. (ಎಂ.ಎನ್)

 

 

Leave a Reply

comments

Related Articles

error: