ಮೈಸೂರು

ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಬೆಲೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿರುವ ಕ್ರಮವನ್ನು ಖಂಡಿಸಿ ಪ್ರತಿಭಟನೆ

ಮೈಸೂರು,ಫೆ.16:- ಜನಸಾಮಾನ್ಯರಿಗೆ ಹೊರೆಯಾಗಲಿರುವ  ಅತಿ ಅಗತ್ಯ ವಸ್ತುವಾದ ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಬೆಲೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿರುವ ಕ್ರಮವನ್ನು ಖಂಡಿಸಿ ಮೈಸೂರಿನ ಆರ್ ಟಿ ಓ ವೃತ್ತ ದಲ್ಲಿಂದು ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರು ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅತಿ ಅಗತ್ಯ ವಸ್ತುವಾದ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯನ್ನು ಪದೇ ಪದೇ ಮಾಡುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಕಳೆದ ತಿಂಗಳು ಹೊಸ  ವರ್ಷದಾರಂಭದಲ್ಲಿಯೇ 150 ರೂಪಾಯಿ ಏರಿಕೆ ಮಾಡಿ ಆಘಾತವನ್ನುಂಟು ಮಾಡಿದ್ದ ಕೇಂದ್ರ ಸರ್ಕಾರ, ಈಗ ಮತ್ತೆ ಒಂದು ತಿಂಗಳ ಅವಧಿಯಲ್ಲಿಯೇ ಪುನಃ 150 ರೂ. ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈಗಾಗಲೇ ದೇಶದ ಜನತೆ, ನೋಟ್ ಬ್ಯಾನ್,  ಜಿ ಎಸ್ ಟಿ, ರೇರಾ ಕಾಯ್ದೆಯಿಂದ ತತ್ತರಿಸಿಹೋಗಿದ್ದು, ಸಾಮಾನ್ಯ ಜನರ ಜೀವನ ಮಟ್ಟ ಪ್ರಪಾತಕ್ಕೆ ಹೋಗಿದೆ. ಜೀವನ ನಡೆಸುವುದೇ ಕಷ್ಟಕರವಾಗಿದೆ.  ಇಂತಹ ಸಮಯದಲ್ಲಿ ಪದೇಪದೇ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ ಮಾಡುತ್ತಿರುವುದು ಸಾಮಾನ್ಯ ಜನರ ಮೇಲೆ ಅಧಿಕ ಹೊರೆ ಬೀಳಲಿದೆ. ದೇಶದ ಆರ್ಥಿಕತೆ ಹದಗೆಟ್ಟಿರುವ ಸಮಯದಲ್ಲಿ, ಜನರ ಆದಾಯವೇ ಹೆಚ್ಚಾಗದ ಪರಿಸ್ಥಿತಿಯಲ್ಲಿ, ದೇಶದ ಜಿ ಡಿ ಪಿ ಕುಸಿದಿರುವ ಸಮಯದಲ್ಲಿ  ಅಗತ್ಯ ವಸ್ತು ಬೆಲೆ ಹೆಚ್ಚಳ ಮಾಡುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ.   ಕೇಂದ್ರ ಸರ್ಕಾರ   ಉದ್ಯಮಿಗಳ ಪರವಾಗಿ ಯೋಜನೆಗಳನ್ನು ರೂಪಿಸುವುದರ ಮೂಲಕ ಬಡಜನರ ವಿರೋಧಿ ಸರ್ಕಾರ ಇದು ಎಂದು ನಿರೂಪಿಸುತ್ತಿದೆ ಎಂದರು.

ಮಾತೆತ್ತಿದರೆ ಅಚ್ಛೇ ದಿನಗಳು ಬರುತ್ತದೆ ಎಂದು ಹೇಳುವ ಪ್ರಧಾನಿಯವರು, ಬಡ ಗ್ರಾಮೀಣ ಮಹಿಳೆಯರು ಸೌದೆ ಓಲೆ ಹಚ್ಚದಂತೆ ನೋಡಿಕೊಳ್ಳುತ್ತೇನೆ, ಹೊಗೆ ಮುಕ್ತ, ಕಟ್ಟಿಗೆ ಮುಕ್ತ ಭಾರತ ಮಾಡುತ್ತೇನೆಂದು ಹೇಳಿ, ಈಗ ದಿನದಿಂದ ದಿನಕ್ಕೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿದರೆ ಮತ್ತೆ ಜನರು ಸೌದೆಯತ್ತ ಮುಖ ಮಾಡುತ್ತಾರಷ್ಟೇ. ಆದ್ದರಿಂದ ಕೇಂದ್ರ ಸರ್ಕಾರ ಈ ಕೂಡಲೇ ಬೆಲೆ ಏರಿಕೆಗೆ ಕಡಿವಾಣ ಹಾಕಿ ಸಾಮಾನ್ಯ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿ ಮಾಡಿ ಈಗ ಹೆಚ್ಚಳ ಮಾಡಿರುವ ಎಲ್ಪಿಜಿ ಗ್ಯಾಸ್ ದರವನ್ನು ಕೂಡಲೇ ಇಳಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನಯಲ್ಲಿ  ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ , ಡಾ. ಶಾಂತರಾಜೇಅರಸ್ ಪಿ, ಶಾಂತಮೂರ್ತಿ, ವಿಜಯೇಂದ್ರ, ಅಕ್ಷಯ್, ರಾಜೇಶ್ ಪಿ, ಪ್ರಭುಶಂಕರ್ ಎಂ ಬಿ, ಗಿರೀಶ್ ಗೌಡ, ಮೊಗಣ್ಣಾಚಾರ್, ಬಂಗಾರಪ್ಪ, ಪರಿಸರ ಚಂದ್ರು, ವಂದನಾ, ಗುರುಮಲ್ಲಪ್ಪ, ನಂಜುಂಡಸ್ವಾಮಿ, ದರ್ಶನ್ ಗೌಡ, ಸ್ವಾಮಿ, ಶ್ರೀನಿವಾಸ ರಾಜಕುಮಾರ್, ರಮೇಶ್, ಪ್ರೀತಂ, ಸಂತೋಷ್, ಗುರುಶಂಕರ್, ಕಲೀಂ, ಭರತ್ ಕುಮಾರ್, ಪ್ರದೀಪ್, ಕೃಷ್ಣ ಸಿ, ಭಾಸ್ಕರ, ದುರ್ಗೇಶ್ ಕುಮಾರ್,  ಪ್ರಸಾದ್, ಪ್ರೀತಂ, ಸಿದ್ದೇಶ್, ರಮಾಬಾಯಿನಗರ ಮಲ್ಲೇಶ್, ಸತೀಶ್, ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: