ಮೈಸೂರು

ನಂಜನಗೂಡಿನ ಮಣ್ಣು ಪರೀಕ್ಷಾ ಕೇಂದ್ರಕ್ಕೆ ಹಿಡಿದ ಗ್ರಹಣ : ಬೀಗ ಜಡಿದ ಕೃಷಿ ಇಲಾಖೆ ಅಧಿಕಾರಿಗಳು

ಮೈಸೂರು,ಫೆ.17:- ರೈತರಿಗೆ ವರದಾನವಾಗಿದ್ದ ನಂಜನಗೂಡಿನ ಮಣ್ಣು ಪರೀಕ್ಷಾ ಕೇಂದ್ರಕ್ಕೆ ಗ್ರಹಣ ಹಿಡಿದಿದ್ದು, ರೈತರ ಕೃಷಿಭೂಮಿ ಮಣ್ಣು ಪರೀಕ್ಷಾ ಕೇಂದ್ರಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.

ನಂಜನಗೂಡು ಉಪ ವಿಭಾಗಕ್ಕೆ ಸೇರಿದ್ದ ಗುಂಡ್ಲುಪೇಟೆ, ಹೆಚ್ ಡಿ ಕೋಟೆ,  ನರಸೀಪುರ ಸೇರಿದಂತೆ ವಿವಿಧ ತಾಲೂಕಿನ ರೈತರಿಗೆ  ಈ ಮಣ್ಣು ಪರೀಕ್ಷಾ ಕೇಂದ್ರ ಕೇಂದ್ರಸ್ಥಾನವಾಗಿತ್ತು. ಇದು ನಂಜನಗೂಡು ಪಟ್ಟಣದ ಇಓ ಕಚೇರಿ ಸಮೀಪ ಇದ್ದು,  ಸುಮಾರು ನಲವತ್ತು ಐವತ್ತು ವರ್ಷಗಳಿಂದಲೂ ರೈತರಿಗೆ ಅನುಕೂಲಕರವಾಗಿತ್ತು. ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಮೂರ್ನಾಲ್ಕು ವರ್ಷಗಳಿಂದ ಸಂಪೂರ್ಣವಾಗಿ ಬಾಗಿಲು ಮುಚ್ಚಿ ಬೀಗ ಜಡಿಯಲಾಗಿದೆ.

ಇತ್ತೀಚೆಗೆ ನಡೆದ ರೈತರ ಕುಂದುಕೊರತೆ ಸಭೆಯಲ್ಲಿ ತಹಶೀಲ್ದಾರ್ ಮಹೇಶ್ ಕುಮಾರ್ ಅವರನ್ನು ರೈತ ಮುಖಂಡರು ಮಣ್ಣು ಪರೀಕ್ಷಾ ಕೇಂದ್ರ ತೆರೆಯಲು ಆಗ್ರಹಿಸಿದ್ದರು. ರೈತರು ಸಾಲಸೋಲ ಮಾಡಿ ಬೆಳೆ ಬೆಳೆಯುವ  ಭೂಮಿಯ ಮಣ್ಣು ಪರೀಕ್ಷೆ ಮಾಡಿಸಿ ಉತ್ತಮ ಇಳುವರಿ ಪಡೆಯಲು ಮಣ್ಣು ಪರೀಕ್ಷೆ ಪ್ರಮುಖವಾಗಿರುತ್ತದೆ. ರೈತರ ಭೂಮಿಯಲ್ಲಿನ ಮಣ್ಣಿನ ಸಮಸ್ಯೆಗಳಿಗೆ  ಇಲ್ಲಿನ ಅಧಿಕಾರಿಗಳು  ಎಚ್ಚೆತ್ತುಕೊಳ್ಳುತ್ತಿಲ್ಲ. ಆದ್ದರಿಂದ ರೈತರಿಗೆ  ದಿಕ್ಕು  ತೋಚದಂತಾಗಿದೆ. ರೈತರಿಗೆ ಬೇಕಾಗಿರುವ ಪ್ರಮುಖ ಮಣ್ಣು ಪರೀಕ್ಷಾ ಕೇಂದ್ರ ಕಚೇರಿಗೆ ಬೀಗ ಜಡಿದಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೃಷಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಕಾರ್ಯವೈಖರಿಗೆ ಇದೊಂದು  ದೊಡ್ಡ ಉದಾಹರಣೆಯಾಗಿದ್ದು, ರೈತ ಪರ ಎನ್ನುವ ಸರ್ಕಾರ ಮತ್ತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಿ ಮಣ್ಣು ಪರೀಕ್ಷಾ ಕೇಂದ್ರಕ್ಕೆ ಕಾಯಕಲ್ಪ ನೀಡುವರೇ ಎಂಬುದನ್ನು ಕಾದು ನೋಡಬೇಕಿದೆ . (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: