ಮೈಸೂರು

ಬಡ್ತಿ ಮೀಸಲಾತಿ ಕುರಿತು ಸುಪ್ರೀ ಕೋರ್ಟ್ ನೀಡಿರುವ ತೀರ್ಪು ಗಂಭೀರ ಸಮಸ್ಯೆಯಾಗಿದೆ :ಎಚ್.ವಿಶ್ವನಾಥ್

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಡ ಪಂಗಡಗಳಿಗೆ ಬಡ್ತಿ ಮೀಸಲಾತಿ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ತುಂಬಾ ಗಂಭೀರವಾದ ಸಮಸ್ಯೆ ಹಾಗೂ ವಿಷಾದನೀಯ ಸಂಗತಿ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಹೇಳಿದರು.

ಮೈಸೂರು ವಿಭಾಗೀಯ ರಾಜ್ಯ ಮತ್ತು ಕೇಂದ್ರ ಸರ್ಕಾರಿ, ಅರೆ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಧಿಕಾರಿಗಳ, ನೌಕರರ ಪರಿಷತ್ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಕುರಿತು ಬಡ್ತಿ ಮೀಸಲಾತಿ ವಿಚಾರ ಸಂಕಿರಣದಲ್ಲಿ ಅಧ‍್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇವರಾಜ ಅರಸು ಅವರ ಕಾಲದಿಂದಲೂ ಬಡ್ತಿ ಮೀಸಲಾತಿ ಸಮಸ್ಯೆ ಇದೆ. ಇದನ್ನು ಪರಿಹರಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಏಕಾಏಕಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ರಾಜ್ಯ ಸರ್ಕಾರ   ಗಂಭೀರ ಚರ್ಚೆ ನಡೆಸದೆ ತುಂಬಾ ವಿಳಂಬ ಮಾಡುತ್ತಿದೆ. ತಕ್ಷಣ ಉತ್ತರ ನೀಡುವಂತೆ ಈ ವೇದಿಕೆಯ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹ ಪಡಿಸುತ್ತೇನೆ ಎಂದರು.

ಮೀಸಲಾತಿ ಪ್ರಮಾಣ ಹೆಚ್ಚಿಸಿ ಎಂದು ಹೇಳುತ್ತಾರೆ. ಆದರೆ ಮೀಸಲಾತಿ ಹೆಚ್ಚಿಸಿ ಅದನ್ನು ಹಂಚಲು ಆಂಜನೇಯನ ಕೈಗೆ ಕೊಡುವುದು ಸರಿಯೇ? ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆಗೆ ಹಾಗೂ ಎಸ್ ಎಸ್ಟಿ ಗಳ ಅಭಿವೃದ್ಧಿಗಾಗಿ 26 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಆದರೆ ಸರಿಯಾದ ಸದ್ಬಳಕೆ ಮಾಡದೇ ವ್ಯರ್ಥ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಹೋರಾಟ ಪ್ರಾರಂಭವಾಗಿದೆ. ಈ ಹೋರಾಟಕ್ಕೆ ಜಯ ಸಿಗಲಿ ಎಂದು ಆಶಿಸಿದರು.

ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಮಾಜಿ ಅಧ‍್ಯಕ್ಷ ಹೆಚ್.ಹನುಮಂತಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ದಲಿತರಾಗಿ ಹುಟ್ಟದಿದ್ದರೆ ಬಹುಶಃ ಈ ದೇಶದ ಮೊದಲ ರಾಷ್ಟ್ರಾಧ‍್ಯಕ್ಷ ಇಲ್ಲವೇ ಪ್ರಧಾನ ಮಂತ್ರಿಯಾಗುತ್ತಿದ್ದರು. ಆದರೆ ಇದಕ್ಕೆ ಅಡ್ಡಿಯಾದದ್ದು ಜಾತಿ ಎಂದರು. ಅಂಬೇಡ್ಕರ್ ಅವರು ದಲಿತರಿಗಾಗಿ ಯಾವತ್ತೂ ಮೀಸಲಾತಿ ಬೇಕು ಎಂದು ಕೇಳಲಿಲ್ಲ. ಅವರು ಹೋರಾಡಿದ್ದು ಸಮಾನತೆಗಾಗಿ ಎಂದು ಹೇಳಿದರು.

ಅಂಬೇಡ್ಕರ್ ಅವರ ವಿಚಾರಧಾರೆಗಳು, ಅವರ ತ್ಯಾಗ, ಹೋರಾಟ ಎಲ್ಲವೂ ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ದಲಿತ ವರ್ಗಕ್ಕಾಗಿ. ನ್ಯಾಯ, ಸಮಾನತೆ ಮತ್ತು ಭ್ರಾತೃತ್ವಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ತಿಳಿಸಿದರು.

ಮೈಸೂರು ವಿವಿಯ ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆ ಮಾತನಾಡಿ, ದಲಿತರು ಕೇವಲ ಮೀಸಲಾತಿಗಾಗಿ ಮಾತ್ರ ಹೋರಾಟ ಮಾಡುವುದಲ್ಲ. ಅನ್ಯಾಯ, ಶೋಷಣೆ, ದೌರ್ಜನ್ಯಗಳ ವಿರುದ್ಧ ಸಿಡಿದೇಳಬೇಕು. ವ್ಯವಸ್ಥೆಯನ್ನು ಪ್ರಶ್ನಿಸಬೇಕು ಎಂದರು.

ನಮ್ಮ ಮೇಲೆ ದೌರ್ಜನ್ಯಗಳು ಹೆಚ್ಚಾದಾಗ ಡಾ.ಬಿ.ಆರ್ ಅಂಬೇಡ್ಕರ್ ಅವರ ವಿಚಾರಧಾರೆಗಳು ಪ್ರಸ್ತುತವಾಗುತ್ತವೆ. ಪ್ರತಿಯೊಬ್ಬರಿಗೂ ಸಾಮಾಜಿ ಬದ್ಧತೆ ಮತ್ತು ಸಾಮಾಜಿಕ ಜವಾಬ್ದಾರಿ ಇರಬೇಕು ಎಂದು ಹೇಳಿದರು.

ಪರಿಷತ್ ನ ಅಧ‍್ಯಕ್ಷ ಶಾಂತರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಮಾನಸಗಂಗೋತ್ರಿಯ ನ್ಯಾಯಶಾಸ್ತ್ರ ವಿಭಾಗದ ಪ್ರಾಧ‍್ಯಾಪಕ ಪ್ರೊ.ಸಿ.ಬಸವರಾಜು, ಪ್ರಾಧ‍್ಯಾಪಕ ಪ್ರೊ.ಮಹೇಶ್ ಚಂದ್ರಗುರು , ಸಾಹಿತಿ  ಪ್ರೊ.ಕೆ.ಎಸ್ ಭಗವಾನ್, ಪ್ರೊ.ಶಬೀರ್ ಮುಷ್ತಫ, ಸಿದ್ದಬಸವಯ್ಯ, ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: