ಪ್ರಮುಖ ಸುದ್ದಿ

ಕಾರ್ಮಿಕ ಸಮ್ಮಾನ್ ಪ್ರಶಸ್ತಿ : ಫೆ.20 ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ

ರಾಜ್ಯ(ಮಡಿಕೇರಿ) ಫೆ.18 :- ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭಧ್ರತಾ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಮಾರ್ಚ್ 1 ರಂದು ಕಾರ್ಮಿಕ ಸಮ್ಮಾನ್ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಅಸಂಘಟಿತ ಕಾರ್ಮಿಕ ವಲಯದಲ್ಲಿ ಕೆಲಸ ಮಾಡುವ 12 ವರ್ಗಗಳ ಕಾರ್ಮಿಕರಿಗೆ ಕಾರ್ಮಿಕ ಸಮ್ಮಾನ ಪ್ರಶಸ್ತಿ ನೀಡುವ ಸಂಬಂಧ ಅಪರ ಜಿಲ್ಲಾಧಿಕಾರಿ ಡಾ.ಸ್ನೇಹ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಪೂರ್ವಭಾವಿ ಸಭೆ ನಡೆಯಿತು.
ಅಸಂಘಟಿತ ಕಾರ್ಮಿಕ ವಲಯಗಳಾದ, ಹಮಾಲರು, ಟೈಲರ್‍ಗಳು, ಚಿಂದಿ ಆಯುವವರು, ಗೃಹ ಕಾರ್ಮಿಕರು, ಮೆಕಾನಿಕ್‍ಗಳು, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಭಟ್ಟಿ ಕಾರ್ಮಿಕರು, ಖಾಸಗಿ ವಾಹನ ಚಾಲಕರುಗಳಿಗೆ ಫೆಬ್ರವರಿ 17 ರೊಳಗೆ ಕಾರ್ಮಿಕ ಸಮ್ಮಾನ್ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು, ಆದರೆ ಈವರೆಗೂ ಹೆಚ್ಚಿನ ಕಾರ್ಮಿಕರು ಅರ್ಜಿ ಸಲ್ಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಂಘ ಸಂಸ್ಥೆಗಳ ಮನವಿಯ ಮೇರೆಗೆ ಅಪರ ಜಿಲ್ಲಾಧಿಕಾರಿಗಳು ಫೆಬ್ರವರಿ 20 ರ ಸಂಜೆ 5.30ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆಗಳಿಲ್ಲವೆಂದು ಪೊಲೀಸ್ ಇಲಾಖೆಯಿಂದ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು. ಈ ಸಂಬಂಧ ಚಲನ್ ಕಟ್ಟಲು ಜಿಲ್ಲಾ ಕೇಂದ್ರಕ್ಕೆ ಅಸಂಘಟಿತ ಕಾರ್ಮಿಕರು ಆಗಮಿಸಬೇಕಿತ್ತು. ಆದರೆ ಸೂಕ್ತ ಸಮಯಕ್ಕೆ ಪ್ರಮಾಣಪತ್ರ ಸಲ್ಲಿಸಲು ಕಾರ್ಮಿಕರಿಗೆ ಕಷ್ಟವಾಗುತ್ತಿರುವುದರಿಂದ, ಸಂಘ ಸಂಸ್ಥೆಯ ಸದಸ್ಯರು ಅಪರ ಜಿಲ್ಲಾಧಿಕಾರಿಯವರಲ್ಲಿ ಮನವಿ ಸಲ್ಲಿಸಿ ಸಂಬಂಧಪಟ್ಟ ಸ್ಥಳೀಯ ಠಾಣೆಯಲ್ಲೇ ಚಲನ್ ಕಟ್ಟಲು ಅವಕಾಶ ನೀಡುವಂತೆ ಕೋರಿದರು. ಬಳಿಕ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅವರು ಈ ಸಂಬಂಧ ಸೂಕ್ತ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಸಂಘ ಸಂಸ್ಥೆಯ ಪ್ರತಿನಿಧಿಗಳು ಮಾತನಾಡಿ, ಒಂದು ವರ್ಗದಲ್ಲಿ 3 ಜನರನ್ನು ಆಯ್ಕೆ ಮಾಡಲು ಸರ್ಕಾರ ಸೂಚಿಸಿದ್ದು, ಇದರಿಂದ ತೊಂದರೆಯಾಗುತ್ತದೆ. ಆದ್ದರಿಂದ ಹೆಚ್ಚಿನ ಜನರನ್ನು ಒಂದು ವರ್ಗದಿಂದ ಆಯ್ಕೆ ಮಾಡುವಂತೆ ಕೋರಿದರು. ಸೂಕ್ತ ಕ್ರಮಕ್ಕಾಗಿ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆಯಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕು ಕಾರ್ಮಿಕಾಧಿಕಾರಿ ಯತ್ನಟ್ಟಿ, ಜಿಲ್ಲಾ ಟೈಲರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಬಿ.ಎಸ್.ಆನಂದ್, ಜಿಲ್ಲಾ ವಾಹನ ಚಾಲಕರ ಕಾರ್ಮಿಕರ ಸಂಘದ ಅಧ್ಯಕ್ಷರಾದ ಮೇದಪ್ಪ, ಅರುಣ್ ಕುಮಾರ್, ಪ್ರಸನ್ನ ಸೇರಿದಂತೆ ಇತರರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: