ಕರ್ನಾಟಕಪ್ರಮುಖ ಸುದ್ದಿ

ಹಿರಿಯ ನಟಿ ಕಿಶೋರಿ ಬಲ್ಲಾಳ ವಿಧಿವಶ

ಬೆಂಗಳೂರು,ಫೆ.18-ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ಹಿರಿಯ ನಟಿ ಕಿಶೋರಿ ಬಲ್ಲಾಳ ಇಂದು ನಿಧನರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಟಿ ಬೆಂಗಳೂರಿನ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಿಶೋರಿ ಬಲ್ಲಾಳ ಅವರ ನಿಧನದ ಸುದ್ದಿಯನ್ನು ಅವರ ಸೊಸೆ ಅಹಲ್ಯ ಬಲ್ಲಾಳ ಖಚಿತಪಡಿಸಿದ್ದಾರೆ.

ಮೂಲತಃ ರಂಗಭೂಮಿ ಕಲಾವಿದೆಯಾಗಿದ್ದ ಕಿಶೋರಿ ಬಲ್ಲಾಳ ಅವರು, 1960ರಲ್ಲಿ ‘ಇವಳೆಂಥಾ ಹಂಡ್ತಿ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದರು. ಸುಮಾರು 75ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಹಿಂದಿಯಲ್ಲೂ ಬಣ್ಣ ಹಚ್ಚಿದ್ದಾರೆ.ಬಾಲಿವುಡ್ ನಟ ಶಾರೂಖ್ ಖಾನ್ ನಟಿಸಿದ್ದ ‘ಸ್ವದೇಶ್’ ಚಿತ್ರದಲ್ಲಿ ಶಾರೂಖ್ ಗೆ ತಾಯಿ ಪಾತ್ರದಲ್ಲಿ ನಟಿಸಿದ್ದರು.

ರವಿ ಗರಣಿ ನಿರ್ದೇಶನದ ಅಮೃತವರ್ಷಿಣಿ ಧಾರಾವಾಹಿ ಸೇರಿದಂತೆ ಅನೇಕ ಧಾರಾವಾಹಿ ಹಾಗೂ ಜಾಹೀರಾತುಗಳಲ್ಲೂ ಅಭಿನಯಿಸಿದ್ದರು.

ಮೂಲತಃ ದಕ್ಷಿಣ ಕನ್ನಡದ ಮಂಗಳೂರಿನವರು ಇವರು. ಭರತನಾಟ್ಯ ಕಲಾವಿದ ಶ್ರೀಪತಿ ಬಲ್ಲಾಳರನ್ನು ಮದುವೆಯಾಗಿದ್ದರು ಕಿಶೋರಿ. (ಎಂ.ಎನ್)

 

Leave a Reply

comments

Related Articles

error: