ಪ್ರಮುಖ ಸುದ್ದಿ

ಕೊಡವ ಸಾಹಿತ್ಯ ಅಕಾಡೆಮಿಯಿಂದ ಕೊಡವ-ಕನ್ನಡ ಸಾಹಿತ್ಯ ಕಮ್ಮಟ

ರಾಜ್ಯ( ಮಡಿಕೇರಿ) ಫೆ.18 :- ಸಾಹಿತ್ಯಾಸಕ್ತರಲ್ಲಿ ಅದರಲ್ಲೂ ಯುವಜನರಲ್ಲಿ ಸಾಹಿತ್ಯಾಭಿರುಚಿಯನ್ನು ಮೂಡಿಸಿ ಉತ್ತಮ ಸಾಹಿತ್ಯ ಕೃಷಿಗೆ ಪ್ರೇರೇಪಿಸುವ ಉದ್ದೇಶದಿಂದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಎರಡು ದಿನಗಳ ಕೊಡವ-ಕನ್ನಡ ಸಾಹಿತ್ಯ ಕಮ್ಮಟವನ್ನು ಆಯೋಜಿಸಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಜನರಲ್ಲಿ ಸಾಹಿತ್ಯಾಭಿರುಚಿ ಮೂಡಿಸುವ ಉದ್ದೇಶದಿಂದ ಫೆ.22 ಮತ್ತು 23ರಂದು ವೀರಾಜಪೇಟೆಯ ಬಾಳುಗೋಡುವಿನಲ್ಲಿರುವ ಫೆಡರೇಷನ್ ಆಫ್ ಕೊಡವ ಸಮಾಜ ಕಟ್ಟಡದಲ್ಲಿ ಈ ಕಮ್ಮಟ ನಡೆಯಲಿದ್ದು, ವೀರಾಜಪೇಟೆಯ ತೂಕ್ ಬೊಳಕ್ ಕಲೆ, ಕ್ರೀಡೆ ಸಾಹಿತ್ಯ ಅಕಾಡೆಮಿ, ಕೊಡವ ತಕ್ಕ್ ಎಳ್ತ್‍ಕಾರಡ ಕೂಟ ಹಾಗೂ ಫೆಡರೇಷನ್ ಆಫ್ ಕೊಡವ ಸಮಾಜದ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಫೆ.22ರ ಪೂರ್ವಾಹ್ನ 10ಗಂಟೆಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಫೆಡರೇಷನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞರಂಡ ಜಿ.ಅಯ್ಯಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇವರೊಂದಿಗೆ ತೂಕ್‍ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಕೊಡವ ಎಳ್ತ್‍ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಪಾಲ್ಗೊಳ್ಳಲಿದ್ದಾರೆ ಎಂದರು.
ಎರಡು ದಿನಗಳ ಈ ಕಮ್ಮಟದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಯನಾಂಗದ ನಿರ್ದೇಶಕ ಡಾ. ಹೆಬ್ಬಾಲೆ ಕೆ.ನಾಗೇಶ್ (ಕಾದಂಬರಿ), ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ (ವಿಮರ್ಶೆ), ಕವಿ ಹಾಗೂ ಚಿತ್ರಸಾಹಿತಿ ರಮೇಶ್ ಗುಬ್ಬಿ ಕೈಗಾ( ಕವನ, ಚುಟುಕ, ಹನಿಗವನ, ಮುಕ್ತಕ), ಕೇಂದ್ರ ಆಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪಡೆದಿರುವ ಶಾಂತಿ ಕೆ.ಅಪ್ಪಣ್ಣ (ಕಥೆ), ಹಿರಿಯ ಸಾಹಿತಿ ನಾಗೇಶ್ ಕಾಲೂರು(ಲಲಿತ ಪ್ರಬಂಧ ಮತ್ತು ಹಾಸ್ಯ ಬರಹ), ಗಿರೀಶ್ ಕಿಗ್ಗಾಲು (ಷಟ್ಪದಿ ರಚನೆ ಮತ್ತು ಸಾಹಿತ್ಯ ರಸಪ್ರಶ್ನೆ), ಕೊಡಗಿನ ಗೌರಮ ಪ್ರಶಸ್ತಿ ಪುರಸ್ಕೃತ ಬರಹಗಾರ್ತಿ ಸುನೀತಾ ಲೋಕೇಶ್ ಸಾಗರ (ಅನುವಾದ ಸಾಹಿತ್ಯ) ಅವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ. ಇವರೊಂದಿಗೆ ಯೋಗ ತರಬೇತುದಾರರಾದ ಹೆಚ್.ಆರ್.ಮಧು, ಅಯ್ಯಪ್ಪ ಹಾಗೂ ಹಾಗೂ ಗೀತಾರ್ ಅವರುಗಳು ಫೆ.23ರ ಬೆಳಗ್ಗೆ ಯೋಗ ತರಬೇತಿ ನೀಡಲಿದ್ದಾರೆ ಎಂದು ವಿವರಿಸಿದರು.
ಅಂದು ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಕಾಂಡೇರ ಡಾನ್ ಕುಶಾಲಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಫೆ.23ರ ಅಪರಾಹ್ನ 2ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ತೂಕ್‍ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ ಸಂಚಾಲಕ ಮುಲ್ಲೇಂಗಡ ಮಧೋಶ್ ಪೂವಯ್ಯ, ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಫಡರೇಷನ್ ಆಫ್ ಕೊಡವ ಸಮಾಜದ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಾಹಿತ್ಯ ಕಮ್ಮಟದಲ್ಲಿ ಕನಿಷ್ಟ 75 ಮಂದಿಗೆ ಅವಕಾಶ ನೀಡುವುದಾಗಿ ನಿರ್ಧರಿಸಲಾಗಿದೆಯಾದರೂ, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು ಎಂದು ಕಾರ್ಯಕ್ರಮದ ಸಂಚಾಲಕ ಪಡಿಞರಂಡ ಪ್ರಭು ಕುಮಾರ್ ತಿಳಿಸಿದರು. ರಾತ್ರಿ ತಂಗಲು ಮಾತ್ರ 75ಮಂದಿಗೆ ವ್ಯವಸ್ಥೆ ಮಾಡಲು ಸಾಧ್ಯವಿರುವುದರಿಂದ ಅಂತಹವರು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ನುಡಿದರು.
ಗೋಷ್ಠಿಯಲ್ಲಿ ಹಾಜರಿದ್ದ ತೂಕ್ ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ ಸಂಚಾಲಕ ಮಧೋಶ್ ಪೂವಯ್ಯ ಮಾತನಾಡಿ, ಯುವಜನರು ಮೊಬೈಲ್ ಗೀಳಿನಿಂದ ಹೊರಬಂದು ಸಾಹಿತ್ಯ ರಚನೆಯತ್ತ ಮುಖ ಮಾಡುವುದರೊಂದಿಗೆ ಈ ಕಮ್ಮಟದ ಮೂಲಕ ಕೊಡಗಿನಲ್ಲಿ ಗಟ್ಟಿ ಸಾಹಿತ್ಯ ಹೊರಬರಬೇಕು ಎಂಬುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಗೌರಮ್ಮ ಮಾದಮ್ಮಯ್ಯ ಹಾಗೂ ಮಾಚಿಮಾಡ ಜಾನಕಿ ಮಾಚಯ್ಯ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: